ADVERTISEMENT

ಮೀನುಗಾರಿಕೆ ದೋಣಿಗೆ ಬೆಂಕಿ, 65 ಲಕ್ಷ ಹಾನಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 18:15 IST
Last Updated 6 ಮಾರ್ಚ್ 2011, 18:15 IST

ಮಂಗಳೂರು: ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಶನಿವಾರ ತಡರಾತ್ರಿ ಸಮುದ್ರ ಮಧ್ಯದಲ್ಲೇ ಬೆಂಕಿಗಾಹುತಿಯಾಗಿದೆ. ದೋಣಿಯಲ್ಲಿದ್ದ ಒಂಬತ್ತು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಇಡೀ ದೋಣಿ ಸುಟ್ಟು ಕರಕಲಾಗಿದ್ದು, ರೂ. 65 ಲಕ್ಷದಷ್ಟು ಹಾನಿ ಉಂಟಾಗಿದೆ.

ಮಂಗಳೂರಿನ ಜೋಸೆಫ್ ಡಿಸೋಜ ಅವರಿಗೆ ಸೇರಿದ ‘ಸೇಂಟ್ ಆಂಥೊನಿ’ ಎಂಬ ದೋಣಿ ಫೆ.28ರಂದು ಮೀನುಗಾರಿಕೆಗೆ ತೆರಳಿತ್ತು. ಸೋಮೇಶ್ವರ ಸಮೀಪ ಕಡಲಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಶಾರ್ಟ್ ಸರ್ಕಿಟ್‌ನಿಂದ ದೋಣಿಯಲ್ಲಿ ಬೆಂಕಿ ಹೊತ್ತಿಕೊಂಡಿತು. ದೋಣಿ ಮಾಲೀಕ ಜೋಸೆಫ್ ಡಿಸೋಜ ಸಹಿತ ಒಂಬತ್ತು ಮಂದಿ ಮೀನುಗಾರರು ತಕ್ಷಣ ಸಮುದ್ರಕ್ಕೆ ಜಿಗಿದು ಪಾರಾದರು.

ಸಮೀಪದಲ್ಲೇ ಇದ್ದ ಯಮುನಾ ಪ್ರಸಾದ್ ಹಾಗೂ ಶಾನ್ ಪೀಟರ್ ಎಂಬ ದೋಣಿಗಳಲ್ಲಿ ಇದ್ದ ಮೀನುಗಾರರು ಈ 9 ಮಂದಿಯನ್ನು ರಕ್ಷಿಸಿ ತೀರಕ್ಕೆ ಕರೆ ತಂದರು. ಅದಾಗಲೇ ಮೀನುಗಾರಿಕೆ ನಡೆಸಿ ದೋಣಿಯಲ್ಲಿ ಹಿಡಿದಿಟ್ಟಿದ್ದ ಭಾರಿ ಪ್ರಮಾಣದ ಮೀನಿನ ರಾಶಿ, ಬಲೆ ಹಾಗೂ ಮರದ ಪರಿಕರಗಳು ಸುಟ್ಟು ಭಸ್ಮವಾದವು. ಬಹುತೇಕ ಸುಟ್ಟು ಕರಕಲಾಗಿರುವ ದೋಣಿಯನ್ನು ಬೇರೊಂದು ದೋಣಿ ಸಹಾಯದಿಂದ ಹಳೆ ಬಂದರು ಧಕ್ಕೆಗೆ ಎಳೆದು ತರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.