ADVERTISEMENT

ಮೂಲ ಸೌಲಭ್ಯ ವಂಚಿತ ಕಾಲೇಜು ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ಔರಾದ್: ಇಲ್ಲಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಹಾಗೂ ಮೂಲ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಕಾಲೇಜು ಶುರುವಾಗಿ ನಾಲ್ಕೈದು ವರ್ಷ ಕಳೆದರೂ ಸ್ವಂತ ಕಟ್ಟಡ ಇಲ್ಲದೆ ಗುರುಭವನ ಮತ್ತು ಸುತ್ತಲಿನ ಬಯಲು ಪ್ರದೇಶದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವ ಅನಿವಾರ್ಯತೆ ಎದುರಾಗಿದೆ.

ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿಬಿಎಂ ಸೇರಿ ಇಲ್ಲಿ 200 ವಿದ್ಯಾರ್ಥಿಗಳು ಓದುತ್ತಾರೆ. ಇವರಲ್ಲಿ ಅರ್ಧದಷ್ಟು ವಿದ್ಯಾರ್ಥಿನಿಯರಿದ್ದು, ಅವರಿಗೆ ಬಿಡುವಿನ ವೇಳೆಯಲ್ಲಿ ಕುಳಿತುಕೊಳ್ಳಲು ಕೋಣೆಯಾಗಲಿ, ಗ್ರಂಥಾಲಯವಾಗಲಿ ಇಲ್ಲದೆ ಬಯಲಲ್ಲೇ ಕಾಲ ಕಳೆಯಬೇಕಾಗಿದೆ. ಶೌಚಾಲಯ ಇದ್ದರೂ ನೀರಿನ ವ್ಯವಸ್ಥೆ ಇಲ್ಲ. ಇಂಥದರಲ್ಲಿ ನಮ್ಮ ಮಕ್ಕಳು ಹೇಗೆ ಅಧ್ಯಯನ ಮಾಡಬೇಕು ಎಂದು ಪಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಠಡಿ ಕೊರತೆಯಿಂದ ನಾಲ್ಕು ತರಗತಿ ನಡೆಯುವಾಗ ಇತರೆ ತರಗತಿ ವಿದ್ಯಾರ್ಥಿಗಳು ಕಾಯಬೇಕು. ಕಂಪ್ಯೂಟರ್ ಮತ್ತು ಪ್ರಯೋಗಾಲಯ ಕೊಠಡಿಗಳು ಚಿಕ್ಕದಾಗಿರುವುದರಿಂದ ಕೆಲವರು ಕುಳಿತು ಮತ್ತೆ ಕೆಲವರು ನಿಂತು ಪಾಠ ಮಾಡಬೇಕಾಗಿದೆ. ಇಷ್ಟಾದರೂ ಸ್ಥಳೀಯ ಶಾಸಕರು ಮತ್ತು ಪ್ರಾಚಾರ್ಯರು ಏನೂ ಮಾಡುತ್ತಿಲ್ಲ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರಮುಖ ಅಶೋಕ ಶೆಂಬೆಳ್ಳಿ ದೂರಿದ್ದಾರೆ.

ಕಾಲೇಜಿಗೆ ಸ್ವಂತ ಕಟ್ಟಡಕ್ಕಾಗಿ ಅನುದಾನ ನೀಡಲು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಈಗಾಗಲೇ 3.3 ಎಕರೆ ನಿವೇಶನ ಗುರುತಿಸಿ ಕಾಲೇಜು ಹೆಸರಿಗೆ ವರ್ಗಾಯಿಸಗಿದೆ. ಸದ್ಯ ಇರುವ ಸೌಲಭ್ಯದಲ್ಲಿ ಕಾಲೇಜು ನಡೆಯುತ್ತಿದೆ. ಪರ್ಯಾಯ ವ್ಯವಸ್ಥೆಗೆ ಅನುದಾನ ಇಲ್ಲ ಎಂದು ಪ್ರಾಚಾರ್ಯ ಎಂ.ಜಿ. ದೇಶಪಾಂಡೆ ತಿಳಿಸಿದ್ದಾರೆ.

ಸೌಲಭ್ಯದ ಕೊರತೆಯಿಂದ ಪಾಲಕರು ಇಲ್ಲಿ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ವರ್ಷ ಬಿಬಿಎಂ ವಿಭಾಗ ಖಾಲಿ ಉಳಿದಿದೆ. ವಾರದಲ್ಲಿ ಬೇಡಿಕೆಗೆ ಸ್ಪಂಸದಿದ್ದಲ್ಲಿ ಕಾಲೇಜಿನ ಎದುರು ಅನಿರ್ದಿಷ್ಟ ಧರಣಿ ನಡೆಸಲಾಗುವುದು ವಿದ್ಯಾರ್ಥಿ ಪ್ರಮುಖ ಹಾವಪ್ಪ ದ್ಯಾಡೆ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.