ADVERTISEMENT

ಮೊಲ ಕಂಡು ಊರು ಬಿಟ್ಟರು!

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ಕೊರಟಗೆರೆ: ಚಿಕ್ಕ ಕಾಡು ಪ್ರಾಣಿಯೊಂದು ಗ್ರಾಮದೊಳಗೆ ಪ್ರವೇಶ ಮಾಡಿದ್ದೇ ಅಪಶಕುನ ಎಂದು ಭಾವಿಸಿ ಗ್ರಾಮಸ್ಥರೆಲ್ಲರೂ ಕುಟುಂಬ ಪರಿವಾರದೊಂದಿಗೆ ಇಡೀ ಊರನ್ನೇ ಖಾಲಿ ಮಾಡಿ ಜಮೀನು ಬಳಿ ಒಂದು ದಿನ ವಾಸ ಮಾಡಿದ ಘಟನೆ ಶುಕ್ರವಾರ ತಾಲ್ಲೂಕಿನ ಅರಸಾಪುರ ಬಳಿಯ ಹೊಸಪಾಳ್ಯದಲ್ಲಿ ನಡೆದಿದೆ.

ತಾಲ್ಲೂಕಿನ ಗಡಿ ಭಾಗದ ಅರಸಾಪುರ ಗ್ರಾಮದ ಬಳಿಯಿರುವ ಹೊಸಪಾಳ್ಯದಲ್ಲಿ ಸುಮಾರು 50 ಮನೆಗಳಿವೆ. ಈ ಗ್ರಾಮದಲ್ಲಿ ಕುರುಬ ಗೌಡ ಜನಾಂಗವರು ವಾಸವಾಗಿದ್ದಾರೆ. ಮೂರ‌್ನಾಲ್ಕು ದಿನಗಳ ಹಿಂದೆ ಕಾಡು ಪ್ರಾಣಿ ಕುಂದ್ಲಿ (ಮೊಲ) ಗ್ರಾಮದಲ್ಲಿ ಕಾಣಿಸಿಕೊಂಡಿತ್ತು. ಮೊಲ ಊರಿಗೆ ಬರುವುದು ಅಪಶಕುನ ಎಂದು ತಿಳಿದ ಗ್ರಾಮಸ್ಥರು ಗುರುವಾರ ಅರಸಾಪುರದ ಮಾರಮ್ಮ ದೇವಿಯನ್ನು ಕರೆತಂದು ಶಾಂತಿ ಮಾಡಿಸಿದರು.

ನಂತರ ಗ್ರಾಮದಲ್ಲಿ ಮೊಲ ಕಾಣಿಸಿದ್ದರಿಂದ ಕೆಡುಕುಂಟಾಗುತ್ತದೆ ಎಂಬ ಮೂಢನಂಬಿಕೆಯಿಂದ ಶುಕ್ರವಾರ ಬೆಳಿಗ್ಗೆ ಗ್ರಾಮಸ್ಥರು ತಮ್ಮ ಮನೆಯ ವಸ್ತುಗಳು, ಕೋಳಿ, ನಾಯಿ, ದನಕರುಗಳ ಸಮೇತ ಇಡೀ ಊರಿಗೆ ಊರೇ ಖಾಲಿ ಮಾಡಿ ಜಮೀನುಗಳಲ್ಲಿ ಟೆಂಟ್ ಹಾಕಿಕೊಂಡು ವಾಸ ಮಾಡಿದರು. ಅಲ್ಲಿಯೇ ಊಟ ಉಪಚಾರ ಹಾಗೂ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿದರು. ಊರಿಗೆ ಯಾರೊಬ್ಬರು ಹೋಗದಂತೆ ದಾರಿಗೆ ಮುಳ್ಳಿನ ಬೇಲಿ ಹಾಕಿದರು. ಒಂದು ದಿನ ಕಳೆದ ನಂತರ ಊರಿನಲ್ಲಿ ಶಾಂತಿ ಮಾಡಿಸಿ ಊರಿಗೆ ಮರಳುವುದಾಗಿ ಗ್ರಾಮಸ್ಥರು ತಿಳಿಸಿದರು.

ಕಳೆದ ವರ್ಷ ಮಾರಮ್ಮನ ಜಾತ್ರೆಯಲ್ಲಿ ಮಾರಮ್ಮನ ಉತ್ಸವ ಮೂರ್ತಿಯನ್ನು ಮೆರವಣಿಗೆ ಸಂದರ್ಭದಲ್ಲಿ ಎತ್ತಿ ಹಾಕಿದ್ದರಿಂದ ಇಂತಹ ಅಪಶಕುನವಾಗಿದೆ ಎಂದು ಜನರು ನಂಬಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.