ADVERTISEMENT

ಯುವಜನರಲ್ಲಿ ಮತದಾನ ಜಾಗೃತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 19:30 IST
Last Updated 25 ಜನವರಿ 2012, 19:30 IST

ಮಂಗಳವಾರ: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಆರು ದಶಕ ಕಳೆದರೂ ಯುವ ಸಮುದಾಯದಲ್ಲಿ ಮತದಾನದ ಆಸಕ್ತಿ ಇನ್ನೂ ಕಡಿಮೆ ಇದ್ದು, ಜಾಗೃತಿಯ ಮೂಲಕ ಆಸಕ್ತಿ ಮೂಡಿಸಬೇಕಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪಗೌಡ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ವತಿಯಿಂದ ಬುಧವಾರ ಪುರಭವನದಲ್ಲಿ ಏರ್ಪಡಿಸಲಾಗಿದ್ದ ಅಂತರರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚುನಾವಣೆ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಮಾತ್ರ ನಡೆಯುತ್ತಲ್ಲೇ ಇದೆ. ಆದರೆ ಎಲ್ಲ ನಾಗರಿಕರೂ ಸೇರಿ ಉತ್ತಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ.

ಏಕೆಂದರೆ ಇಂದಿಗೂ ಭಾರತದಲ್ಲಿ ಚುನಾವಣಾ ಪ್ರಮಾಣ ಶೇಕಡಾ 100 ರಷ್ಟು ಇಲ್ಲ. ಇದನ್ನು ಹೆಚ್ಚಿಸಬೇಕಾದದ್ದು ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಮತದಾರರಲ್ಲೂ ಇಂದು ಭ್ರಷ್ಟಾಚಾರ ಹೆಚ್ಚಿದೆ. ಹಣ ಪಡೆದು ಮತದಾನ ಮಾಡುವ ಪ್ರವೃತಿ ಜಾಸ್ತಿಯಾಗಿದೆ. ಇದು ನಿಲ್ಲಬೇಕು. ಯಾರಿಗೂ ಹೆದರದೆ, ನಿರ್ಭೀತಿಯಿಂದ ಮತ್ತು ಒತ್ತಡ ರಹಿತವಾಗಿ ಮತದಾನ ಮಾಡಬೇಕು ಎಂದರು.

ದ.ಕ. ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎನ್. ವಿಜಯಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಉತ್ತಮ ಚುನಾವಣಾಕಾರ್ಯ ಮಾಡಿದ ದಕ್ಷಿಣ ಕನ್ನಡದ ತಾಲ್ಲೂಕುಗಳ ವಿವಿಧ ಬೂತ್ ಅಧಿಕಾರಿಗಳಿಗೆ ನಗದು ಬಹುಮಾನ ನೀಡಲಾಯಿತು. ನಿವೃತ್ತ ನ್ಯಾಯಧೀಶ ಕೆ.ಬಿ.ಎಂ. ಪಾಟೀಲ್ ಮುಖ್ಯ ಭಾಷಣ ಮಾಡಿದರು. ಮಹಾನಗರ ಪಾಲಿಕೆ ಆಯುಕ್ತ ಕೆ. ಹರೀಶ್ ಕುಮಾರ್, ಸಹಾಯಕ ಆಯುಕ್ತ ಎಂ.ಎನ್. ವೆಂಕಟೇಶ್ ಇದ್ದರು.
-0-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.