ಗದಗ: `ನಟ ಸಾರ್ವಭೌಮ~ ಎಂದೇ ಖ್ಯಾತಿಗಳಿಸಿರುವ ಚಿಂದೋಡಿ ಶ್ರೀಕಂಠೇಶ ಹಾಗೂ ರಂಗನಾಯಕಿ ವಿಶಾಲಾಕ್ಷಿ ರಾಮದುರ್ಗ ಅವರಿಗೆ `ರಂಗ ಶ್ರೀಗಂಧ~ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಲಾಚೇತನ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಕೊಡುವ `ರಂಗ ಶ್ರೀಗಂಧ~ ಪ್ರಶಸ್ತಿಯನ್ನು ಇಲ್ಲಿನ ಕೆಬಿಆರ್ ಡ್ರಾಮಾ ಕಂಪೆನಿಯ ರಂಗಸಜ್ಜಿಕೆಯಲ್ಲಿ ಶನಿವಾರ ನಡೆದ ರಂಗಸಂಭ್ರಮ ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ರಂಗ ಕಲಾವಿದರಿಗೆ 45 ವರ್ಷ ತುಂಬಿದ ಮೇಲೆ ಮಾಸಾಶನ ನೀಡುವಂತಹ ಕೆಲಸವನ್ನು ಸರ್ಕಾರ ಮಾಡಬೇಕು. ಈಗಿರುವ 60 ವರ್ಷ ವಯೋಮಿತಿಯನ್ನು ಕಡಿತಗೊಳಿಸಬೇಕು ಎಂದು ಮಾಲತಿ ಸುಧೀರ್ ಆಗ್ರಹಿಸಿದರು.
ವೃತ್ತಿ ರಂಗಕಲಾವಿದರಿಗೆ 50 ವರ್ಷಕ್ಕೆ ಮುಪ್ಪು ಆವರಿಸಿಬಿಡುತ್ತದೆ. ಇನ್ನು 60 ವರ್ಷದವರೆಗೆ ಅವರು ಬದುಕಿರುವುದೇ ಹೆಚ್ಚು. ಆದ್ದರಿಂದ ಸರ್ಕಾರ ಈ ವಿಷಯದ ಕಡೆ ಸ್ವಲ್ಪ ಗಮನಹರಿಸುವ ಅವಶ್ಯಕತೆ ಇದೆ. ಮುಖದಲ್ಲಿ ಸುಕ್ಕು ಬರುವ ಮುನ್ನ ಕಲಾವಿದರು ಎರಡು-ಮೂರು ಸಾವಿರ ರೂಪಾಯಿ ಮಾಸಾಶನವನ್ನಾದರೂ ತೆಗೆದುಕೊಂಡು ಜೀವನ ನಡೆಸುತ್ತಾರೆ ಎಂದು ಮನವಿ ಮಾಡಿದರು.
ಡ್ರಾಮ ಕಂಪೆನಿಗಳಿಗೆ ತಿಂಗಳಿಗೆ ಒಂದು ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡುವುದಾಗಿ ಸರ್ಕಾರ ತಿಳಿಸಿದೆ. ಇಷ್ಟು ಸಹಾಯ ಮಾಡಿದರೆ ಸಾಕು, ಮನೆಯ ಒಳಗೆ ಇರುವ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಬರುವಂತೆ ಮಾಡಿಬಿಡುತ್ತೇವೆ ಎಂದರು.
ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಾಟಕ ಅಕಾಡೆಮಿ ರಿಜಿಸ್ಟ್ರಾರ್ ಟಿ.ಜಿ.ನರಸಿಂಹಮೂರ್ತಿ, ನಾಟಕಕಾರ ಪ್ರಕಾಶ ಕಡಪಟ್ಟಿ, ಪ್ರೊ.ಚಂದ್ರಶೇಖರ ವಸ್ತ್ರದ, ಕಲಾಚೇತನ ಸಂಸ್ಥೆಯ ಅಧ್ಯಕ್ಷ ಕಾವೆಂಶ್ರೀ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.