ADVERTISEMENT

ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ಬೈಂದೂರು: `ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟತೆಯನ್ನು ಬಯಲುಗೊಳಿಸಿರುವ ಲೋಕಾಯುಕ್ತ ವರದಿಯ ಪ್ರಕಾರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯದ ಅಮೂಲ್ಯ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿ ಸ್ವಂತ ಸಂಪತ್ತು ಹೆಚ್ಚಿಸಿಕೊಂಡ ಎಲ್ಲರನ್ನು ಶಿಕ್ಷೆಗೊಳಪಡಿಸಬೇಕು~ ಎಂದು ಶುಕ್ರವಾರ ಬೈಂದೂರು ಮತ್ತು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದ ಪ್ರತಿಭಟನಾ ಸಭೆಯಲ್ಲಿ ಆಗ್ರಹಿಸಲಾಯಿತು. ಬೈಂದೂರು ವಿಶೇಷ ತಹಶೀಲ್ದಾರ್ ಕಚೇರಿ ಮುಂದೆ ನಡೆದ ಈ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ, ಸರ್ಕಾರದ ಭ್ರಷ್ಟಾಚಾರ, ಆಡಳಿತ ವೈಫಲ್ಯ ಮತ್ತು ಜನ ವಿರೋಧಿ ಕ್ರಮಗಳನ್ನು ಖಂಡಿಸಿದರು. ಮಳೆಗಾಲ ಮುಗಿಯುವ ಮುನ್ನವೇ ವಿದ್ಯುತ್ ಕಡಿತ ಆರಂಭಿಸಿ ಜನರಿಗೆ ದ್ರೋಹ ಬಗೆಯಲಾಗಿದೆ.

ಭ್ರಷ್ಟಾಚಾರ ಆರೊಪ ಹೊತ್ತು ಮುಖ್ಯಮಂತ್ರಿ ಸಹಿತ ಸಚಿ ಸಂಪುಟದ ಸದಸ್ಯರು ಜೈಲು ಪಾಲಾಗುತ್ತಿದ್ದರೆ, ಲೋಕಾಯುಕ್ತ ವರದಿಯನ್ನು ತಿರಸ್ಕರಿಸಲು ವೇದಿಕೆ ಸಿದ್ಧಪಡಿಸುತ್ತಿರುವ ಸರ್ಕಾರ ನೈತಿಕವಾಗಿ ಕುಸಿದುಹೋಗಿದೆ. ಬಡವರಿಗೆ ವರದಾನವಾಗಿರುವ ಎಲ್ಲ ಸಾಮಾಜಿಕ ನೆರವು ಕಾರ್ಯಕ್ರಮಗಳ ಅನುಷ್ಠಾನ ಕುಂಠಿತವಾಗಿದೆ ಎಂದು ದೂರಿದರು.


ಪಕ್ಷದ ಪ್ರಮುಖರಾದ ಎಸ್. ರಾಜು ಪೂಜಾರಿ, ಎಸ್. ವಾಸುದೇವ ಯಡಿಯಾಳ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ, ಎಸ್. ಮದನ ಕುಮಾರ್ ಅವರೂ ಮಾತನಾಡಿದರು.

ಸಭೆಯ ನಂತರ ಸರ್ಕಾರದ ವಿರುದ್ಧ ಆರೋಪ ಪತ್ರವನ್ನು ಉಪ ತಹಶೀಲ್ದಾರ್ ನರಸಿಂಹ ಅವರಿಗೆ ಸಲ್ಲಿಸಲಾಯಿತು.

ಬ್ಲಾಕ್ ಸಮಿತಿ ಅಧ್ಯಕ್ಷ ಕೆ.ರಮೇಶ ಗಾಣಿಗ, ಕಾರ್ಯದರ್ಶಿ ಸತೀಶ ಎಂ. ನಾಯಕ್, ಕೆಪಿಸಿಸಿ ಸದಸ್ಯ ಬಿ. ರಘುರಾಮ ಶೆಟ್ಟಿ, ಜಿ.ಪಂ ಪಂಚಾಯಿತಿ ಸದಸ್ಯ ಅನಂತ ಮೊವಾಡಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.