ರಾಮನಗರ: ಕಕ್ಷಿದಾರರು ಲೋಕ ಅದಾಲತ್‌ಗಳಲ್ಲಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ಬಗೆಹರಿಸಿಕೊಳ್ಳುವುದರಿಂದ ಹಣ ಮತ್ತು ಸಮಯ ಉಳಿತಾಯವಾಗುತ್ತದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಎನ್.ರುದ್ರಮುನಿ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ರಾಜಿ ಸಂಧಾನಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
ಲೋಕ ಅದಾಲತ್‌ನಂತಹ ಕಾರ್ಯಕ್ರಮಗಳಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಯಾರಾದರು ಕಕ್ಷಿದಾರರು ತಾವು ಪಡೆದ ಸಾಲದ ಬಗ್ಗೆ ಬ್ಯಾಂಕಿನವರು ನೀಡಿರುವ ನೋಟಿಸನ್ನು ತೆಗೆದು ಕೊಂಡು ವಕೀಲ ಬಳಿ ಬಂದರೆ ಅವರನ್ನು ಲೋಕ ಅದಾಲತ್‌ನಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಸಾಲವನ್ನು ಪಡೆಯುವುದರ ಮೂಲ ಉದ್ದೇಶ ಅಭಿವೃದ್ಧಿ ಹೊಂದುವುದು. ಆದರೆ ಸಾಲ ಪಡೆದವರು ನಿಗದಿತ ವೇಳೆಯಲ್ಲಿ ಮರು ಪಾವತಿಸದಿದ್ದಾಗ ಯಾರೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಆದ್ದರಿಂದ ಸಾಲ ಪಡೆದವರು ಉನ್ನತ ಅಭಿವೃದ್ಧಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ನಿರ್ವಹಿಸುವ ಮೂಲಕ ಸಾಲವನ್ನು ಮರು ಪಾವತಿಸಬೇಕು ಎಂದು ತಿಳಿ ಹೇಳಿದರು.
ಕಕ್ಷಿದಾರರು ಸಹ ತಾವು ಪಡೆದ ಸಾಲವನ್ನು ಸರ್ಕಾರಗಳು ಮನ್ನಾ ಮಾಡುತ್ತವೆ ಎಂಬ ಭ್ರಮೆಯಿಂದ ಹೊರಬಂದು ಸಾಲವನ್ನು ಹಿಂದಿರುಗಿಸಲು ಪ್ರಯತ್ನಿಸಬೇಕು. ನೀವು ಸಾಲವನ್ನು ಹಿಂದಿರುಗಿಸುವುದರಿಂದ ನಿಮಗೂ ಮತ್ತು ಬ್ಯಾಂಕಿನವರಿಗೂ ಅನುಕೂಲವಾಗುತ್ತದೆ. ಅಲ್ಲದೆ ಮುಂದಿನ ದಿನಗಳಲ್ಲಿ ನೀವು ಸಾಲವನ್ನು ಪಡೆಯಲು ಸಹಾಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಎಲ್.ಎನ್.ಚನ್ನಬಸವಾರಾಧ್ಯ, ವಕೀಲರುರಾದ ಎಚ್.ಬಿ.ಶಿವಣ್ಣ, ಎಲ್.ಎಂ.ಜಗದೀಶ್, ಸಿ.ಕೆ.ರಾಘವೇಂದ್ರ, ಟಿ.ಎಂ.ಚಂದ್ರಶೇಖರ್, ಕೀರ್ತಿ, ನಂಜೇಗೌಡ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.