ADVERTISEMENT

ವಾಂತಿ ಭೇದಿ: ಮಗು ಸಾವು; 5 ಜನ ಆಸ್ಪತ್ರೆಗೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ಹಾಸನ: ತೀವ್ರವಾದ ವಾಂತಿ ಭೇದಿಯಿಂದಾಗಿ ನಾಲ್ಕು ವರ್ಷದ ಮಗುವೊಂದು ಮೃತಪಟ್ಟು ಕುಟುಂಬದ ಇತರ ಐವರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹಾಸನ ತಾಲ್ಲೂಕಿನ ತಟ್ಟೆಕೆರೆಯಲ್ಲಿ ಶನಿವಾರ ವರದಿಯಾಗಿದೆ. ವಿಷಯುಕ್ತ ಆಹಾರ ಸೇವನೆಯೇ ಘಟನೆಗೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.

ಮೂಲತಃ ಕೊಪ್ಪಳದ ಚನ್ನಪ್ಪನಹಳ್ಳಿಯವರಾದ ರಾಮಣ್ಣ ಮತ್ತು ಅವರ ಕುಟುಂಬದವರು ಇಲ್ಲಿಯ ಮಂಜೇಗೌಡ ಎಂಬುವರ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಫ್ಯಾಕ್ಟರಿಯ ಸಮೀಪದಲ್ಲೇ ಇರುವ ಶೆಡ್‌ನಲ್ಲಿ ಅವರು ವಾಸಿಸುತ್ತಿದ್ದರು. ಗುರುವಾರ ರಾತ್ರಿ ಅನ್ನ ಸಾರು ಊಟ ಮಾಡಿದ ಬಳಿಕ ಎಲ್ಲರಲ್ಲೂ ಅಸ್ವಸ್ಥತೆ ಹಾಗೂ ವಾಂತಿಭೇದಿ ಕಾಣಿಸಿಕೊಂಡಿತ್ತು.

ಮರುದಿನ (ಶುಕ್ರವಾರ) ಬೆಳಿಗ್ಗೆ ಹನುಮಂತಪುರದಲ್ಲೇ ಇರುವ ಖಾಸಗಿ ವೈದ್ಯರನ್ನು ಭೇಟಿಮಾಡಿ ಔಷಧ ಪಡೆದಿದ್ದರು. ಆದರೂ ವಾಂತಿಭೇದಿ ಕಡಿಮೆಯಾಗಿರಲಿಲ್ಲ.

 ವಾಂತಿಭೇದಿ ಜೋರಾಗಿ ಎಲ್ಲರಲ್ಲೂ ನಿಶ್ಶಕ್ತಿ ಕಾಣಿಸಿಕೊಂಡಿದ್ದರಿಂದ ಶನಿವಾರ ಬೆಳಿಗ್ಗೆ ಹಾಸನದ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾದರು. ಹಾಸನಕ್ಕೆ ಬರುವಷ್ಟರಲ್ಲಿ ನಾಲ್ಕು ವರ್ಷದ ಮಗು ಪರಶುರಾಮ ಕೊನೆಯುಸಿರೆಳೆದಿತ್ತು.

ಉಳಿದಂತೆ ರಾಮಣ್ಣ, ಚಂದ್ರಮ್ಮ, ಮಂಜಮ್ಮ , ವಸಂತ ಹಾಗೂ ಹುಲಿಗಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಇಬ್ಬರ ಆರೋಗ್ಯ ತೀರ ಹದಗೆಟ್ಟಿರುವುದರಿಂದ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.