ವಿಜಾಪುರ: ಕಾಂಗ್ರೆಸ್ ಯುವ ಮುಖಂಡ, ಸಂಸದ ರಾಹುಲ್ ಗಾಂಧಿ ಅವರು ಏ.20ರಂದು ಹುಬ್ಬಳ್ಳಿ ಮಾರ್ಗವಾಗಿ ವಿಜಾಪುರಕ್ಕೆ ಆಗಮಿಸಲಿದ್ದಾರೆ.ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಳಿಗ್ಗೆ 9ಕ್ಕೆ ಹುಬ್ಬಳ್ಳಿಗೆ ಆಗಮಿಸುವರು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಹೊರಟು ಬೆಳಿಗ್ಗೆ 10.35ಕ್ಕೆ ವಿಜಾಪುರಕ್ಕೆ ಆಗಮಿಸುವರು.
ವಿಜಾಪುರದ ಬಿಎಲ್‌ಡಿಇ ಸಂಸ್ಥೆಯ ಮೈದಾನದಲ್ಲಿ ಆಯೋಜಿಸಿರುವ ಮುಂಬೈ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕ ಪ್ರದೇಶದ ಒಂಬತ್ತು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಯುವ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಂವಾದ ನಡೆಸುವರು.ಮಧ್ಯಾಹ್ನ 12ಕ್ಕೆ ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿಗೆ ತೆರಳುವರು. ಹುಬ್ಬಳ್ಳಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿನ ಬಜ್ಪೆಗೆ, ಬಜ್ಪೆಯಿಂದ ಹೆಲಿಕಾಪ್ಟರ್‌ನಲ್ಲಿ ಉಡುಪಿಗೆ ತೆರಳುವರು.
ಸಂಜೆ ಬಜ್ಪೆಗೆ ವಾಪಸ್ಸಾಗಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿ ಅಲ್ಲಿ ಸಮಾರಂಭಗಳಲ್ಲಿ ಪಾಲ್ಗೊಂಡು ವಾಸ್ತವ್ಯ ಮಾಡುವರು ಎಂದು ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಭೇಟಿಯ ಹಿನ್ನೆಲೆಯಲ್ಲಿ ವಿಜಾಪುರದ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ದೆಹಲಿಯಿಂದ ಆಗಮಿಸಿರುವ ರಾಹುಲ್ ಗಾಂಧಿ ಅವರ ಭದ್ರತಾ ಪಡೆಯವರು (ಎಸ್‌ಪಿಜಿ) ಸಮಾರಂಭ ನಡೆಯುವ ಮೈದಾನವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಪರಿಶೀಲಿಸಿದ್ದಾರೆ.
ರಾಹುಲ್ ಗಾಂಧಿ ಅವರ ಕಾರ್ಯಕ್ರಮದ ಅಂತಿಮ ಸಿದ್ಧತೆಗಳನ್ನು ಶಾಸಕ ಎಂ.ಬಿ. ಪಾಟೀಲ, ಯುವ ಕಾಂಗ್ರೆಸ್ ಕಾರ್ಯಕ್ರಮ ಸಂಯೋಜಕ ವಿಶಾಲ ಮುತ್ತೇಮವಾರ್ ಮಂಗಳವಾರ ಪರಿಶೀಲನೆ ನಡೆಸಿದರು.ರಾಹುಲ್ ಗಾಂಧಿ ಬರುವ ಹಾಗೂ ನಿರ್ಗಮಿಸುವ ಸಂದರ್ಭದಲ್ಲಿ ವಿಜಾಪುರದ ಸೈನಿಕ ಶಾಲೆಯ ಹೆಲಿಪ್ಯಾಡ್‌ನಿಂದ ಸೊಲ್ಲಾಪುರ ರಸ್ತೆಯಲ್ಲಿರುವ ಬಿಎಲ್‌ಡಿಇ ಮುಖ್ಯದ್ವಾರದ ವರೆಗಿನ ನಾಲ್ಕು ಕಿ.ಮೀ. ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.