ADVERTISEMENT

ವಿವಾಹ ಭೋಜನ: ಮತ್ತೆ 11 ಮಂದಿ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 18:15 IST
Last Updated 2 ಫೆಬ್ರುವರಿ 2011, 18:15 IST

ಸೋಮವಾರಪೇಟೆ: ಇಲ್ಲಿನ ಮಾನಸ ಸಭಾಂಗಣದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭೋಜನ ಸ್ವೀಕರಿಸಿದ ಬಳಿಕ ಅಸ್ವಸ್ಥರಾದವರ ಸಂಖ್ಯೆ ಹೆಚ್ಚುತ್ತಿದ್ದು ಬುಧವಾರ ಮತ್ತೆ 11 ಮಂದಿ ಚಿಕಿತ್ಸೆಗಾಗಿ  ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಂಗಳವಾರ ಸಂಜೆ ವೇಳೆಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ 66 ಮಂದಿ ಒಳರೋಗಿಗಳು ಮತ್ತು  166 ಮಂದಿ ಹೊರ ರೋಗಿಗಳಾಗಿ ಒಟ್ಟು 232 ಮಂದಿ ವಾಂತಿಭೇದಿಗೆ ಚಿಕಿತ್ಸೆ ಪಡೆಯಲು  ದಾಖಲಾಗಿದ್ದರು.ಗರ್ಭಿಣಿ ಹಾಗೂ ಓರ್ವ ಪುರುಷ ರೋಗಿಯ ಸ್ಥಿತಿ ಗಂಭೀರವಾದ್ದರಿಂದ ಅವರನ್ನು  ಮಡಿಕೇರಿ ಆಸ್ಪತ್ರೆಗೆ ಸಂಜೆಯ ವೇಳೆಗೆ ಸ್ಥಳಾಂತರಿಸಲಾಯಿತು. ಆದರೆ ಬಹುತೇಕ ರೋಗಿಗಳ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ. ಕೆಲವರು ಆಸ್ಪತ್ರೆಯಿಂದ ಬುಧವಾರ ಬಿಡುಗಡೆಯಾಗಿ ಮನೆಗೆ  ತೆರಳಿದ್ದಾರೆ.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಓ.ವಿ.ಕೃಷ್ಣಾನಂದ್, ಡಾ.ವೆಂಕಟೇಶ್, ಗೌಡಳ್ಳಿ ಆರೋಗ್ಯ ಕೇಂದ್ರದ  ಡಾ.ಚೇತನ್, ಕುಶಾಲನಗರ ಆಸ್ಪತ್ರೆಯ ಡಾ.ಬಾಲಾಜಿ ಮತ್ತು ಡಾ.ವೀರೇಂದ್ರರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜ.30ರಂದು ಇಲ್ಲಿನ ಕಲ್ಯಾಣ ಮಂಟಪದಲ್ಲಿ ಭೋಜನ ಸ್ವೀಕರಿಸಿದ ಮರುದಿನದಿಂದಲೇ ವಾಂತಿಭೇದಿಗೆ   ತುತ್ತಾದ ಮಕ್ಕಳು, ಮಹಿಳೆಯರು ಮತ್ತು ಪುರುಷರಾದಿಯಾಗಿ ಆಸ್ಪತ್ರೆಗೆ ದಾಖಲಾಗುತ್ತಾ ಬಂದಿದ್ದಾರೆ. ಅತ್ತ ವಧುವಿನ ಸಂಬಂಧಿಕರೂ ಅಸ್ವಸ್ಥರಾಗಿ ಪುತ್ತೂರು, ಉಪ್ಪಿನಂಗಡಿ ಮುಂತಾದ ಕಡೆಗಳಲ್ಲಿ ಆಸ್ಪತ್ರೆಗೆ  ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.