ADVERTISEMENT

ವೈಭವದ ಉಮಾಮಹೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 19:30 IST
Last Updated 5 ಮಾರ್ಚ್ 2012, 19:30 IST

ಕುಶಾಲನಗರ: ಉತ್ತರ ಕೊಡಗಿನ ಗಡಿಭಾಗದ ಶಿರಂಗಾಲ ಗ್ರಾಮದಲ್ಲಿ ಸೋಮವಾರ ಉಮಾಮಹೇಶ್ವರ ರಥೋತ್ಸವ ಸಂಭ್ರಮ, ಸಡಗರದಿಂದ ನೆರವೇರಿತು.

ರಥೋತ್ಸವದಲ್ಲಿ ಜಿಲ್ಲೆಯ ವಿವಿಧ ಭಾಗದ ಭಕ್ತರು ಸೇರಿದಂತೆ ಮೈಸೂರು, ಹಾಸನ ಜಿಲ್ಲೆಗಳ ಅಪಾರ ಜನರು ಆಗಮಿಸಿದ್ದರು. ಎಲ್ಲರೂ  ಶ್ರದ್ಧೆ-ಭಕ್ತಿಯಿಂದ ತೇರು ಎಳೆದರು.

ಪುಷ್ಪ, ಧ್ವಜಗಳಿಂದ ಅಲಂಕೃತಗೊಂಡಿದ್ದ ತೇರಿನಲ್ಲಿ ಉಮಾಮಹೇಶ್ವರ ದೇವರ ವಿಗ್ರಹ ಇರಿಸಿ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ 1ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಮಂತ್ರ ಘೋಷಗಳನ್ನು ಮೊಳಗಿಸಿದರು. ತೇರು ಮಂಗಳವಾದ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ದಾರಿಯುದ್ದಕ್ಕೂ ಭಕ್ತರು ಈಡುಗಾಯಿ ಸೇವೆ ಸಲ್ಲಿಸಿ, ತೇರು ಎಳೆದು ಸಂಭ್ರಮಿಸಿದರು. ತೇರಿನ ಮುಂಭಾಗದಲ್ಲಿ ವೀರಗಾಸೆ ನೃತ್ಯ ಪ್ರದರ್ಶನ ಗಮನ ಸೆಳೆಯಿತು.

ರಥಕ್ಕೆ ಹೂ, ಹಣ್ಣು ಹಾಗೂ ಜವನ ಎಸೆದು ಜನರು ಭಕ್ತಿ ಸಮರ್ಪಿಸಿದರು. ಊರಿನ ಸಂತೆಮಾಳದ ಬಳಿ ರಥೋತ್ಸವ ಸಮಾಪ್ತಿಗೊಂಡಿತು. ಸಂಜೆ ವೇಳೆ ಮತ್ತೆ ಸ್ವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಗ್ರಾಮದ ಕಾವೇರಿ ನದಿದಂಡೆ ಬಳಿ ನಡೆದ ರಥೋತ್ಸವ ಗ್ರಾಮೀಣ ಸೊಗಡು ಅನಾವರಣಗೊಳಿಸಿತು.

ರಥೋತ್ಸವದ ಅಂಗವಾಗಿ ಗ್ರಾಮವನ್ನು ತಳಿರು- ತೋರಣಗಳಿಂದ ಸಿಂಗರಿಸಲಾಗಿತ್ತು. ಗ್ರಾಮದ ಮನೆಗಳ ಅಂಗಳ ರಂಗೋಲಿಯಿಂದ ಕಂಗೊಳಿಸಿತು. ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದವು.
 
ಜಾತ್ರೆಗೆ ಆಗಮಿಸಿದ್ದ ಭಕ್ತರು ದೇಗುಲಕ್ಕೆ ತೆರಳಿ ಹಣ್ಣು,ಕಾಯಿ ಅರ್ಪಿಸಿದರು. ಹೊಳೆಗುಡಿ ಜಾತ್ರೆ ಎಂದೇ ಪ್ರಸಿದ್ಧಿ ಪಡೆದ ಉಮಾಮಹೇಶ್ವರ ಜಾತ್ರೆ ಉತ್ತರ ಕೊಡಗಿನ ಜನರ ಪ್ರಮುಖ ಉತ್ಸವವಾಗಿದೆ.

ದೇವಸ್ಥಾನ ಉತ್ಸವ ಸಮಿತಿ ಅಧ್ಯಕ್ಷ ಎಸ್.ಇ. ರಾಜಪ್ಪ, ಕಾರ್ಯದರ್ಶಿ ಎಸ್.ಕೆ. ಪ್ರಸನ್ನ ರಥೋತ್ಸವದ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.