ADVERTISEMENT

ಶಿಕ್ಷಕರಿಂದ ಆಮರಣ ನಿರಶನ ಸತ್ಯಾಗ್ರಹ: ಹೊರಟ್ಟಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 17:25 IST
Last Updated 15 ಫೆಬ್ರುವರಿ 2011, 17:25 IST

ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರು ನಡೆಸುತ್ತಿರುವ ಪ್ರತಿಭಟನೆಗೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ಬರುವ ಫೆ. 18ರಿಂದ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಎಚ್ಚರಿಕೆ ನೀಡಿದ್ದಾರೆ.

ಈಚೆಗೆ ಅನುದಾನಕ್ಕೆ ಒಳಪಟ್ಟ ಶಾಲಾ ಶಿಕ್ಷಕರಿಗೆ ಕಳೆದ ಒಂದು ವರ್ಷ ನಾಲ್ಕು ತಿಂಗಳಿಂದ ಸಂಬಳ ದೊರೆತಿಲ್ಲ. ತಕ್ಷಣವೇ ಸಂಬಳ ನೀಡಲು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಶಾಲಾ ಶಿಕ್ಷಕರಿಗೆ ನೀಡಲಾಗುವ ಎಲ್ಲ ಸೌಲಭ್ಯಗಳನ್ನು ಅನುದಾನಿತ ಶಾಲೆಗಳ ಶಿಕ್ಷಕರಿಗೂ ನೀಡಬೇಕು. ಈ ಬೇಡಿಕೆಗಳನ್ನಿಟ್ಟುಕೊಂಡು ಕಳೆದ ಫೆ. 7ರಿಂದ ಧಾರವಾಡದ ಶಿಕ್ಷಣ ಆಯುಕ್ತರ ಕಚೇರಿ ಮುಂದೆ ಪ್ರಾಥಮಿಕ, ಪ್ರೌಢಶಾಲೆಗಳ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅರೆಬೆತ್ತಲೆ ಮೆರವಣಿಗೆಯನ್ನೂ ಮಾಡಿದ್ದಾರೆ. ಆದರೂ ಸರ್ಕಾರ ಸ್ಪಂದಿಸಿಲ್ಲ. ಮುಖ್ಯಮಂತ್ರಿಗಳ ಬಳಿ ತಾವು ಮಾಡಿಕೊಂಡ ಮನವಿಗೂ ಪುರಸ್ಕಾರ ದೊರೆತಿಲ್ಲ ಎಂದು ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷರೂ ಆಗಿರುವ ಹೊರಟ್ಟಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.