ADVERTISEMENT

ಶಿಕ್ಷಣದಲ್ಲಿ ಚರಿತ್ರೆ ಭಾಷೆ ಕಡೆಗಣನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST

ಬೀದರ್: ‘ಇಂದಿನ ಶಿಕ್ಷಣ ಪದ್ಧತಿಯಲ್ಲಿ ಚರಿತ್ರೆ ಮತ್ತು ಭಾಷೆ ಕಡೆಗಣನೆಗೆ ಒಳಗಾಗಿದೆ’ ಎಂದು ಖ್ಯಾತ ಕಥೆಗಾರ ಕುಂ.ವೀರಭದ್ರಪ್ಪ ಬುಧವಾರ ವಿಷಾದಿಸಿದರು.

ಬೆಂಗಳೂರಿನ ಮಾಕ್ಸ್‌ಮುಲ್ಲರ್ ಭವನದ ಗಯಟೆ ಇನ್‌ಸ್ಟಿಟ್ಯೂಟ್ ಮತ್ತು ಇಂಡಿಯನ್ ಫೌಂಡೇಶನ್ ಫಾರ್ ಆರ್ಟ್ಸ್ ಸಂಸ್ಥೆಗಳು ಶಿಕ್ಷಕರಿಗಾಗಿ ಏರ್ಪಡಿಸಿರುವ ಎರಡು ದಿನಗಳ ‘ಕಲಿ ಕಲಿಸು’ ಪುನರ್‌ಮನನ ಶಿಬಿರದಲ್ಲಿ ಮಾತನಾಡಿದರು.

 ದೇಶವನ್ನು ಪ್ರೀತಿಸುವಂತಾಗಲು ಚರಿತ್ರೆ ಅರಿಯುವ ಅಗತ್ಯವಿದೆ. ಹಾಗೆಯೇ ಭಾಷೆ ಕೂಡ ಅದ್ಭುತವಾದ ಅಂಶ. ಆದರೆ, ಈ ಎರಡೂ ಅವಗಣನೆಗೆ ತುತ್ತಾಗಿರುವುದು ಆಶಾದಾಯಕ ಬೆಳವಣಿಗೆಯೇನಲ್ಲ. ಇದರಿಂದಾಗಿ ಜನ ತಮ್ಮ ದೇಶವನ್ನು ಪ್ರೀತಿಸುವುದು ಸಾಧ್ಯವಾಗದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಯಾಂತ್ರಿಕ ಶಿಕ್ಷಣ ಪದ್ಧತಿಯಿಂದ ಮಕ್ಕಳು ಕೀ ಕೊಟ್ಟಾಗ ನಡೆಯುವ ರೋಬೊಟ್‌ಗಳಾಗಿದ್ದಾರೆ. ಇದರಿಂದ ಯಂತ್ರಮಾನವರನ್ನು ತಯಾರಿಸಬಹುದೇ ಹೊರತು ಜೀವನ ಪ್ರೀತಿ, ಮೌಲ್ಯಗಳ ಬಗ್ಗೆ ಶ್ರದ್ಧೆ ಇರುವ ಜನಾಂಗವನ್ನು ಸಿದ್ಧಪಡಿಸುವುದು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಆಧುನಿಕ ಯುರೋಪಿಯನ್ ಶಿಕ್ಷಣ ಕ್ರಮ ವಿದ್ಯಾವಂತರಲ್ಲಿ ಅಹಂಕಾರ ಸೃಷ್ಟಿಸಿರುವುದರಿಂದ ಗ್ರಾಮೀಣ ಮತ್ತು ಮೌಖಿಕ ಪರಂಪರೆಯನ್ನು ನಿರ್ಲಕ್ಷ್ಯತನದಿಂದ ನೋಡುವ ಪರಿಪಾಠ ಬೆಳೆದಿದೆ ಎಂದು ಹಿರಿಯ ವಿದ್ವಾಂಸರಾದ ಡಾ. ಬಸವರಾಜ ಮಲಶೆಟ್ಟಿ ವಿಷಾದ ವ್ಯಕ್ತಪಡಿಸಿದರು.

ಶಿಕ್ಷಕರು ನಿತ್ಯನಿರಂತರ ಕಲಿಕೆಯಿಂದ ಮಾತ್ರ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬಲ್ಲರು. ವಿದ್ಯಾರ್ಥಿಗಳಿಗೆ ಹೊಸ ದೃಷ್ಟಿಕೋನ ನೀಡುವುದರ ಜೊತೆಗೆ ಜ್ಞಾನದಾಹ ಹೆಚ್ಚುವಂತೆ ಮಾಡುವ ಶಿಕ್ಷಕರೇ ಮಾದರಿ ಶಿಕ್ಷಕರು ಎಂದು ಆರ್.ಕೆ. ಹುಡುಗಿ ಹೇಳಿದರು. ಯೋಜನಾಧಿಕಾರಿ ಅನುಪಮಾ ಪ್ರಕಾಶ್ ಸ್ವಾಗತಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.