
ರಾಯಚೂರು: ಶಿಕ್ಷಣ ವೃತ್ತಿಯನ್ನು ಇಷ್ಟಪಡುವುದರೊಂದಿಗೆ ಅದನ್ನು ಆರಾಧಿಸಿ ಭಕ್ತಿಯಿಂದ ಪೂಜಿಸುವವರೇ ಉತ್ತಮ ಶಿಕ್ಷಕರು. ಶಿಕ್ಷಕರ ನಡೆ ನುಡಿ ಶುದ್ಧವಾಗಿರಬೇಕು ಅಂದಾಗ ಮಾತ್ರ ಆದರ್ಶ ಶಿಕ್ಷಕನಾಗಲು ಸಾಧ್ಯ ಎಂದು ಸಿಂಧನೂರಿನ ಆರ್.ಜಿ.ಎಂ. ಮಹಾವಿದ್ಯಾಲಯದ ಉಪನ್ಯಾಸಕಿ ಡಾ. ಮಧುಮತಿ ದೇಶಪಾಂಡೆ ಹೇಳಿದರು.
ಇಲ್ಲಿನ ಟ್ಯಾಗೋರ ಶಿಕ್ಷಣ ಸಂಸ್ಥೆಯ ಎಸ್.ಆರ್.ಕೆ. ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮುದಾಯಕ್ಕೆ ಸಂಸ್ಕಾರ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಯುವ ಶಿಕ್ಷಕ ವೃಂದದಲ್ಲಿ ಓದು ಬರಹ ಹವ್ಯಾಸ ಕಡಿಮೆ ಆಗುತ್ತಿದೆ. ಇದಕ್ಕೆ ಏನೇ ಕಾರಣಗಳಿದ್ದರೂ ಓದುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಭಾರತೀಯ ಗುರುವಿನ ಕಣ್ಣಲ್ಲಿ ಮ್ಯಾಜಿಕ್ ಇದೆ. ಆ ಗುರುವಿನ ಕಂಠದಲ್ಲಿ ಮಧುರತೆ ಇದೆ ಎಂದು ಪಾಶ್ಚಿಮಾತ್ಯ ಶಿಕ್ಷಣ ತಜ್ಞರೇ ಹೇಳಿದ್ದಾರೆ. ಈ ಮಾತು ಶಿಕ್ಷಕ ಸಮುದಾಯದ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದರು.
ಆಳವಾದ ಅಧ್ಯಯನ, ಸೂಕ್ತ ಉದಾಹರಣೆಗಳೊಂದಿಗೆ ಬೋಧನೆ ಮಾಡಿದಾಗ ಮಕ್ಕಳ ಕಲಿಕೆಗೆ ಸಹಕಾರಿಯಾಗುತ್ತದೆ ಎಂದು ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಪಾಪರೆಡ್ಡಿ ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಮಾಚನೂರು, ಬಿ.ಗೋಪಾಲರೆಡ್ಡಿ, ಪ್ರಧಾನ ಕಾರ್ಯದರ್ಶಿ ಆರ್.ಕೆ ಅಮರೇಶ, ಖಜಾಂಚಿ ಸಂಜಯಕುಮಾರ ಜೈನ್, ಸದಸ್ಯ ಭೀಮನಗೌಡ ಇಟಗಿ, ಪ್ರಾಚಾರ್ಯರಾದ ಆಶಾ ಪ್ರೇಮಲತಾ, ಬಿಇಡಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ಎಸ್ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.