ರಾಯಚೂರು: ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬಂಥ ಸ್ಥಿತಿ ಇದೆ. ಮುಖಂಡರ ಅಧಿಕಾರ ಲಾಲಸೆ, ಆಂತರಿಕ ಕಚ್ಚಾಟದಿಂದ ದೇಶದಲ್ಲಿ ಕರ್ನಾಟಕದ ಮಾನ ಹೋಗಿದೆ. ಬಿಜೆಪಿ ಸರ್ಕಾರ ಬಿದ್ಹೋಗೋದೇ ಒಳ್ಳೇದು ಎಂದು ಬಿಜೆಪಿ ಸಂಸತ್ ಸದಸ್ಯ ಎಸ್. ಪಕ್ಕೀರಪ್ಪ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜನತೆಯ ಸಮಸ್ಯೆ ಆಲಿಸಲು, ಅಭಿವೃದ್ಧಿ ಕೆಲಸದತ್ತ ಗಮನ ಕೊಡಲು ಸರ್ಕಾರ ನಡೆಸುತ್ತಿರುವವರಿಗೆ ಪುರುಸೊತ್ತಿಲ್ಲದಂತಾಗಿದೆ. ನಾನು ಸಿಎಂ ಆಗಬೇಕು, ಅವನು ಸಿಎಂ ಆಗ್ತಾನೆ, ಅವನಾಗಬಾರದು ಹೀಗೆ ಆಂತರಿಕ ಕಚ್ಚಾಟದಲ್ಲಿ ರಾಜ್ಯದ ಹಿತಾಸಕ್ತಿ ಬಲಿ ಕೊಡಲಾಗಿದೆ ಎಂದು ಆರೋಪಿಸಿದರು.
ಯಾರು ಸಿಎಂ ಆಗಬ್ಬೇಕು ಎಂದು ಹೇಳುವುದೇ ಕಷ್ಟವಾಗಿದೆ. ಸಿಎಂ ಆಗಬೇಕು ಎಂಬವರ ಪಟ್ಟಿ ಈಗ ಬಹಳ ದೊಡ್ಡದಿದೆ. ಹೀಗಾಗಿ ಹೇಳುವುದು ಕಷ್ಟ. ಈ ಸ್ಥಿತಿಯಲ್ಲಿ ರಾಜ್ಯದ ಅಭಿವೃದ್ಧಿ ಅಸಾಧ್ಯ. ಒಂದು ರೀತಿಯಲ್ಲಿ ಈ ಬಿಜೆಪಿ ಸರ್ಕಾರ ಬಿದ್ಹೋಗೋದೇ ಒಳ್ಳೇದು ಎಂದು ತಿಳಿಸಿದರು.
ಈ ಸರ್ಕಾರ ಬಿದ್ದು ಹೋದರೆ ಡಿಸೆಂಬರ್‌ನಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಆಗುತ್ತದೆ. ಆ ಚುನಾವಣೆಗೆ ಬಿ.ಶ್ರೀರಾಮುಲು ಅವರು ಸ್ಥಾಪಿಸಿದ ಬಿ.ಎಸ್.ಆರ್. ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
ರಾಷ್ಟ್ರಪತಿ ಚುನಾವಣೆಯಲ್ಲಿ ಪಿ.ಎ. ಸಂಗ್ಮಾರಿಗೆ ಮತ ಹಾಕುತ್ತೇನೆ. ಈಗ ನಾನು ಬಿಜೆಪಿ ಸಂಸದ. ಇನ್ನೂ ಎರಡು ವರ್ಷ ಅಧಿಕಾರ ಅವಧಿ ಇದೆ. ಎನ್‌ಡಿಎ ಈಗಾಗಲೇ ಸಂಗ್ಮಾ ಅವರಿಗೆ ಬೆಂಬಲ ಸೂಚಿಸಿ ನಿಲುವು ಸ್ಪಷ್ಟಪಡಿಸಿದೆ. ಹೀಗಾಗಿ ಸಂಗ್ಮಾ ಅವರಿಗೇ ಮತ ಚಲಾಯಿಸುವುದಾಗಿ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.