ADVERTISEMENT

ಸಾಂಸ್ಕೃತಿಕ ಅಧಃಪತನ ದೊಡ್ಡ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ದಾವಣಗೆರೆ: ರಾಜ್ಯವೂ ಸೇರಿದಂತೆ ದೇಶದ ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇಂತಹ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಬೇಕಾದ ಜನರ ಸಾಂಸ್ಕೃತಿಕ ಬೆನ್ನೆಲುಬನ್ನೇ ಆಳುವ ವರ್ಗಗಳು ನಾಶ ಮಾಡಲು ಹೊರಟಿವೆ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ರಾಜ್ಯ ಕಾರ್ಯದರ್ಶಿ ಕೆ. ರಾಧಾಕೃಷ್ಣ ಕಳವಳ ವ್ಯಕ್ತಪಡಿಸಿದರು.

ಪ್ರಗತಿಪರ ಸಾಂಸ್ಕೃತಿಕ ವೇದಿಕೆ `ಆವಿಷ್ಕಾರ~ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶರತ್‌ಚಂದ್ರ ಚಟರ್ಜಿ ಅವರ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಸಾಂಸ್ಕೃತಿಕ ಅಧಃಪತನ ಎನ್ನುವುದು ವಿದ್ಯಾರ್ಥಿ-ಯುವಜನರನ್ನು ಕಾಡುತ್ತಿರುವ ಬಹು ದೊಡ್ಡ ಸಮಸ್ಯೆಯಾಗಿದೆ. ಪ್ರತಿಗಾಮಿಯಾಗಿರುವ ಸಾಹಿತ್ಯ, ಕಲೆ, ಸಂಸ್ಕೃತಿ ಕಲುಷಿತಗೊಂಡು ಯುವಜನರು ನೈತಿಕತೆ ಕಳೆದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ವ್ಯಕ್ತಿಯಲ್ಲಿ ಉನ್ನತ ಚಿಂತನೆ ಬೆಳೆಯಲು ಸಾಹಿತ್ಯ ಅಧ್ಯಯನ ಸಹಕಾರಿ. ಉನ್ನತ ಸಮಾಜದ ಬೆಳವಣಿಗೆಗೆ ಕೊಡುಗೆ ನೀಡುವುದು ದೇಶದ ಯುವಜನರ ಗುರಿಯಾಗಬೇಕಿದೆ. ಅದಕ್ಕಾಗಿ ವೈಜ್ಞಾನಿಕ ದೃಷ್ಟಿಕೋನದ ಆವಶ್ಯಕತೆ ಇದೆ. ಅಂತಹ ದೃಷ್ಟಿಕೋನವನ್ನು ಮಾರ್ಕ್ಸ್ ತತ್ವ-ಸಿದ್ಧಾಂತಗಳು ಒಳಗೊಂಡಿದೆ ಎಂದು ವಿಶ್ಲೇಷಿಸಿದರು.

ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಎಂ.ಎನ್. ಶ್ರೀರಾಮ್ ಮಾತನಾಡಿ, ನವೋದಯ ಕಾಲದ ಮಹಾನ್ ಸಾಹಿತಿ ಶರತ್‌ಚಂದ್ರ ಚಟರ್ಜಿ ಅವರ ಸಾಹಿತ್ಯ ಕೃತಿಗಳು ಪ್ರಗತಿಪರ ಹಾಗೂ ಸಮಾಜಮುಖಿಯಾಗಿವೆ. ಅವರ ಕಾದಂಬರಿಯ ಬಗ್ಗೆ ವಿದ್ಯಾರ್ಥಿಗಳು ವೈಜ್ಞಾನಿಕ ತಿಳಿವಳಿಕೆ ಹೊಂದಬೇಕು ಎಂದು ಕರೆ ನೀಡಿದರು.

ವಿಚಾರವಾದಿ ಪ್ರೊ.ಬಿ.ವಿ. ವೀರಭದ್ರಪ್ಪ, ಡಾ.ನಾಗರಾಜ್, ಆವಿಷ್ಕಾರದ ಸಂಘಟಕರಾದ ಎಂ.ವಿ. ಸುಮಾ, ಟಿ.ವಿ.ಎಸ್. ರಾಜು, ರುದ್ರೇಶ್, ಮಂಜುನಾಥ್ ಕೈದಾಳ್, ದೀಪಾ, ಪರಶುರಾಮ್, ಶಿವಾಜಿರಾವ್, ತಿಪ್ಪೇಸ್ವಾಮಿ, ಸಂತೋಷ್, ಲತಾ, ಕಾವ್ಯಾ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು. ರಾಘವೇಂದ್ರ ನಾಯಕ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.