ADVERTISEMENT

ಸಾಹಿತ್ಯ ಸಮ್ಮೇಳನದ ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 16:35 IST
Last Updated 26 ಫೆಬ್ರುವರಿ 2011, 16:35 IST
ಸಾಹಿತ್ಯ ಸಮ್ಮೇಳನದ ಅದ್ದೂರಿ ಮೆರವಣಿಗೆ
ಸಾಹಿತ್ಯ ಸಮ್ಮೇಳನದ ಅದ್ದೂರಿ ಮೆರವಣಿಗೆ   

ಕುಷ್ಟಗಿ: ಕೊಪ್ಪಳ ಜಿಲ್ಲಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪಟ್ಟಣದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಡಾ.ಚಂದ್ರಶೇಖರ ಮಹಾಸ್ವಾಮಿ ಮಂಟಪದ ಬಳಿ ಶನಿವಾರ ಬೆಳಿಗ್ಗೆ ಧ್ವಜಾರೋಹಣಗಳನ್ನು ನೆರವೇರಿಸುವ ಮೂಲಕ ಎರಡು ದಿನಗಳ ಸಮ್ಮೇಳನಕ್ಕೆ ಸಾಂಕೇತಿಕ ಚಾಲನೆ ನೀಡಲಾಯಿತು.

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಶಾಸಕ ಅಮರೇಗೌಡ ಬಯ್ಯಾಪೂರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಆರ್.ಕೆ. ನಲ್ಲೂರಪ್ರಸಾದ ಪರಿಷತ್ ಧ್ವಜಾರೋಹಣ ಮಾಡಿದರು. ಕನ್ನಡ ಧ್ವಜಾರೋಹಣವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ ನೆರವೇರಿಸಿದರು. ಪರಿಷತ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ಚಂದ್ರಪ್ಪ ಮತ್ತಿತರರು ಹಾಜರಿದ್ದರು.

ವೀರ ಯೋಧ ಮಲ್ಲಯ್ಯ ವೃತ್ತದಲ್ಲಿ ಭುವನೇಶ್ವರಿ ದೇವಿ ಮೆರವಣಿಗೆಗೆ ಪುರಸಭೆ ಅಧ್ಯಕ್ಷೆ ಮೋದಿನಬಿ ಮುಲ್ಲಾ ಚಾಲನೆ ನೀಡಿದರು. ಉಪಾಧ್ಯಕ್ಷೆ ರೂಪಾ ಕೊನಸಾಗರ ಉಪಸ್ಥಿತರಿದ್ದರು. ನಂತರ ತೆರೆದ ಅಲಂಕೃತ ವಾಹನದಲ್ಲಿ ಭುವನೇಶ್ವರಿದೇವಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಸಮ್ಮೇಳನಾಧ್ಯಕ್ಷ ಡಾ.ಬಸವರಾಜ ಸಬರದ ಅವರು ವಾಹನ ಏರದೇ ಪತ್ನಿ ಡಾ.ವಿಜಯಶ್ರೀ ಸಬರದ ಮತ್ತಿತರರೊಂದಿಗೆ ಮೆರವಣಿಗೆ ಮುಂದೆ ಪಾದಯಾತ್ರೆಯಲ್ಲಿ ತೆರಳಿದರು. ಸಮ್ಮೇಳನಾಧ್ಯಕ್ಷರೇ ಹೆಜ್ಜೆ ಹಾಕಿದ್ದರಿಂದ ಉಳಿದವರು ಬಿಸಿಲನ್ನು ಲೆಕ್ಕಿಸದೆ ಮೂರು ಕಿ.ಮೀ. ವರೆಗೂ ನಡೆಯುವಂತಾಯಿತು.

ಮಾರುತಿ, ಕನಕದಾಸ, ಟಿಪ್ಪುಸುಲ್ತಾನ, ಶಾಮಿದಲಿ, ಮಲ್ಲಿಕಾರ್ಜುನ ವೃತ್ತ, ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಮೆರವಣಿಗೆ ನಿಗದಿತ ವೇಳೆಯಲ್ಲಿ ಸಮ್ಮೇಳನದ ಸ್ಥಳ ತಲುಪಿತು. ಮೆರವಣಿಗೆಯುದ್ದಕ್ಕೂ  ಗೊರ್ಲೆಕೊಪ್ಪದ ಕರಡಿಮಜಲು, ಕೊಟ್ಟೂರಿನ ಜೋಗತಿ ನೃತ್ಯ, ಸ್ಥಳೀಯ ಕಲಾವಿದರ ಬ್ಯಾಂಜಿಯೊ,  ಜನಪದ ಕಲಾವಿದರು ಮೆರವಣಿಗೆಗೆ ಮೆರಗು ನೀಡಿದರು. ಮೆರವಣಿಗೆಯಲ್ಲಿ ಕಲಾವಿದರು, ಸಾರ್ವಜನಿಕರ ಕೊರತೆ ಎದ್ದುಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT