ADVERTISEMENT

ಸಿಎಂಗೆ ಅಧಿಕಾರವೇ ಇಲ್ಲ: ಮೊಯಿಲಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 19:30 IST
Last Updated 5 ಮಾರ್ಚ್ 2012, 19:30 IST

ಇನ್ನಾ(ಪಡುಬಿದ್ರಿ): `ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗೆ ಅಧಿಕಾರವೇ ಇಲ್ಲದಂತಾಗಿದೆ. ಡಿ.ವಿ.ಸದಾನಂದ ಗೌಡ ಅವರು ನಾನ್ ಪ್ಲೇಯ್ಡ ಕ್ಯಾಪ್ಟನ್ ಆಗಿ ಕೆಲಸ-ಕಾರ್ಯ ನಿರ್ವಹಿಸುತ್ತಿದ್ದಾರೆ~ ಎಂದು ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವ ವೀರಪ್ಪ ಮೊಯಿಲಿ ಲೇವಡಿ ಮಾಡಿದರು.

ಕಾಂಗ್ರೆಸ್‌ನ ಇನ್ನಾ ಸ್ಥಳೀಯ ಸಮಿತಿ ವತಿಯಿಂದ ಇನ್ನಾ ಪೇಟೆಯಲ್ಲಿ ಸೋಮವಾರ ನಡೆದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

`ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭೂ ಹಗರಣ, ಗಣಿ ಹಗರಣ, ಸದನದಲ್ಲಿ ಬ್ಲೂಫಿಲಂ ವೀಕ್ಷಣೆ, ರೇವ್ ಪಾರ್ಟಿಯಂತಹ ಕೆಲಸ-ಕಾರ್ಯ ಗಳಲ್ಲಿಯೇ ತಲ್ಲೀನವಾಗಿದೆ~ ಎಂದು ಟೀಕಿಸಿದರು.

`ಬಿಜೆಪಿ ಜಾತಿ, ಮತಗಳನ್ನು ವಿಭಜಿಸಿ ಮತ ಪಡೆಯುತ್ತಿದೆ. ಆದರೆ ಕಾಂಗ್ರೆಸ್ ಹಲವು ವರ್ಷಗಳಿಂದಲೂ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಕೇಂದ್ರ ಸರ್ಕಾರ ಹತ್ತಾರು ಜನಪರ ಯೋಜನೆಗಳನ್ನು ಹಮ್ಮಿಕೊಂಡಿದೆ. ಆದರೆ ರಾಜ್ಯ ಸರ್ಕಾರದ ಅಭಿವೃದ್ಧಿ ಶೂನ್ಯ~ ಎಂದು ಗಮನ ಸೆಳೆದರು.

ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ, ಶಾಸಕ ಗೋಪಾಲ ಭಂಡಾರಿ, ಎಂ.ಪಿ.ಮೊಯಿದಿನಬ್ಬ, ರಾಕಿ ಡಿಸಿಲ್ವ, ಅಮರನಾಥ ಶೆಟ್ಟಿ, ಜಿ.ಎ.ಬಾವಾ, ಇಮ್ತಿಯಾಜ್ ಅಹಮದ್, ಕುಶಾ ಆರ್.ಮೂಲ್ಯ, ಸುಧಾಕರ ಕೋಟ್ಯಾನ್, ನವೀನ್ ಚಂದ್ರ ಜೆ.ಶೆಟ್ಟಿ, ಅಜೀಜ್ ಹೆಜಮಾಡಿ, ನವೀನ್ ಎನ್.ಶೆಟ್ಟಿ, ಸುಪ್ರೀತಾ ಶೆಟ್ಟಿ, ಜಾನ್ ಮೆಂಡೋನ್ಸಾ, ಜಯ ಎಸ್.ಕೋಟ್ಯಾನ್, ದೀಪಕ್ ಕೋಟ್ಯಾನ್ ಇದ್ದರು.

ಇದಕ್ಕೂ ಮುನ್ನ ಸಾಂತೂರು ಕೊಪ್ಲದಲ್ಲಿ ಸ್ಥಾನೀಯ ಸಮಿತಿ ಕಚೇರಿಯನ್ನು ಮೊಯಿಲಿ ಉದ್ಘಾಟಿಸಿದರು. ಇನ್ನಾ ಸಮಾವೇಶ ಬಳಿಕ ಮುಂಡ್ಕೂರು ಹಾಗೂ ಬೆಳ್ಮಣ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.