ADVERTISEMENT

ಸಿದ್ಧತೆ ಕೊರತೆ; ಸಾಹಿತ್ಯ ಸಮ್ಮೇಳನ ಮುಂದಕ್ಕೆ?

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ಗಂಗಾವತಿ: ನಗರದಲ್ಲಿ ನಡೆಯುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ತಯಾರಿ ತೃಪ್ತಿದಾಯಕವಾಗಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಅಧ್ಯಕ್ಷ ಹಾಗೂ ಕಸಾಪ ಕೇಂದ್ರ ಸಮಿತಿ ಕಾರ್ಯಕಾರಿ ಮಂಡಳಿ ಸದಸ್ಯ ಮಂಜುನಾಥ ಅಸಮಾಧಾನ ವ್ಯಕ್ತಪಡಿಸಿದರು.

ಸಮ್ಮೇಳನದ ಅಂಗವಾಗಿ ಗಂಗಾವತಿಯಲ್ಲಿ ನಡೆಯುತ್ತಿರುವ ತಯಾರಿ, ಪೂರಕ ಸಿದ್ಧತೆ, ಹಣಕಾಸಿನ ವ್ಯವಸ್ಥೆ, ನಗರ ರಸ್ತೆಗಳ ಸ್ಥಿತಿಗತಿಯ ಬಗ್ಗೆ ಪರಿಶೀಲಿಸಲು ಕೇಂದ್ರ ಸಮಿತಿ ನಿರ್ದೇಶನದ ಮೇರೆಗೆ ನಗರಕ್ಕೆ ಆಗಮಿಸಿದ್ದ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರಕಟಿತ ದಿನಗಳಂದೇ ಸಮ್ಮೇಳನ ನಡೆಸಬೇಕೆಂಬ ಇಚ್ಛೆ ಇದ್ದಾಗಲೂ ಕೆಲ ಅನಿವಾರ್ಯ ಸ್ಥಿತಿಯಲ್ಲಿ ನಿರ್ಧಾರ ಬದಲಿಸಬೇಕಾಗುತ್ತದೆ. ಅಂತಿಮ ನಿರ್ಣಯ ಕೇಂದ್ರ ಸಮಿತಿಗೆ ಬಿಟ್ಟದ್ದು ಎನ್ನುವ ಮೂಲಕ ಮಂಜುನಾಥ ಸಮ್ಮೇಳನ ಮುಂದೂಡುವ ಸೂಚನೆ ನೀಡಿದರು.

ಬೆಳಗಿನ ಸಮಯದಲ್ಲಿ ನಗರದಲ್ಲಿ ಒಂದು ಸುತ್ತು ಹಾಕಿದ ನಂತರ ರಸ್ತೆಗಳ ವಾಸ್ತವ ಸ್ಥಿತಿ  ಗಮನಕ್ಕೆ ಬಂದಿದೆ. ರಸ್ತೆ ಸುಧಾರಣೆಯಾಗಲು ಕನಿಷ್ಠ ಒಂದುವರೆ ತಿಂಗಳಾದರೂ ಬೇಕಾಗುತ್ತದೆ. ಆದರೆ ಸಮ್ಮೇಳನಕ್ಕೆ ಬಾಕಿ ಇರುವುದು ಕೇವಲ 38 ದಿನ ಮಾತ್ರ. ಬಾಕಿ ಉಳಿದ ದಿನಗಳಲ್ಲಿ ತ್ವರಿತ ಗತಿಯಲ್ಲಿ ರಸ್ತೆ ದುರಸ್ತಿ ಸಾಧ್ಯವಿಲ್ಲ ಎಂದರು.

ಸಮ್ಮೇಳನ ಮೆರವಣಿಗೆ ನಡೆಯುವ ನಗರದ ಮುಖ್ಯ ರಸ್ತೆಗಳು ಸಂಪೂರ್ಣ ದುರಸ್ತಿಯಾಗಿ ಸಿದ್ಧಗೊಂಡಿರಬೇಕು. ಸದ್ಯ ಸರ್ಕಾರದಿಂದ ರಸ್ತೆ ದುರಸ್ತಿಗೆ ಹಣ ಬಿಡುಗಡೆಯಾಗಿದ್ದರೂ, ಟೆಂಡರ್ ಪ್ರಕ್ರಿಯೆ, ಆದೇಶ ಜಾರಿ ಮಾಡಲು, ಗುಣಮಟ್ಟದ ದುರಸ್ತಿ ಕಾಮಗಾರಿ ಕೈಗೊಳ್ಳಲು ಸಮಯ ಹಿಡಿಯುವುದರಿಂದ ಸಮ್ಮೇಳನಕ್ಕೆ ಬಾಕಿ ಉಳಿದ ದಿನಗಳಲ್ಲಿ ಇದನ್ನು ಮಾಡಿ ಮುಗಿಸಲು ಕಷ್ಟಸಾಧ್ಯ ಎಂದರು.

ಸರ್ಕಾರದಿಂದ ಬರಬೇಕಿರುವ ಹಣ ಕೈಸೇರಿಲ್ಲದಿರುವುದು, ಕೊಪ್ಪಳ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಜಾರಿಯಾದ ನೀತಿಸಂಹಿತೆಯಿಂದ ಸುಮಾರು 30 ದಿನಗಳ ಕಾಲ ಸಿದ್ಧತೆ ಮೇಲೆ ಪರಿಣಾಮ ಉಂಟಾಗಿದೆ.

ಅವಸರದಿಂದ ಸಮ್ಮೇಳನ ಮಾಡುವ ಬದಲಿಗೆ ಇನ್ನಷ್ಟು ದಿನ ಮುಂದೂಡುವುದು ಲೇಸೆಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದಲೂ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸಮಿತಿಗಳ ಸಭೆಯ ಮಾಹಿತಿ, ಇದುವರೆಗೂ ಆದ ಪ್ರಗತಿ, ಆಗಬೇಕಿರುವ ಕಾರ್ಯದ ಬಗ್ಗೆ ಸ್ಥೂಲ ಚಿತ್ರಣದ ವರದಿಯನ್ನು ಕೇಂದ್ರ ಸಮಿತಿಗೆ ಒಪ್ಪಿಸಲಾಗುವುದು ಎಂದರು. ಕೇಂದ್ರ ಸಮಿತಿಯ ಸದಸ್ಯ ಚಂದ್ರಪ್ಪ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.