ADVERTISEMENT

ಸುಖ- ದುಃಖಗಳಿಗೆ ಸಮಾನವಾಗಿ ಸ್ಪಂದಿಸಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 19:30 IST
Last Updated 4 ಮಾರ್ಚ್ 2012, 19:30 IST

ಕವಿತಾಳ: ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬ ವ್ಯಕ್ತಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಅಂಕಲಿಮಠದ ವೀರಭದ್ರ ಮಹಾಸ್ವಾಮಿಗಳು ಹೇಳಿದರು.

ಸಮೀಪದ ಇರಕಲ್‌ನ ಬಸವಯೋಗ ಮಂಟಪದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಸುಖ ದುಃಖಗಳಿಗೆ ಸಮಾನವಾಗಿ ಸ್ಪಂದಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.

ಕವಿತಾಳ ಕಲ್ಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಸಾಮರಸ್ಯ ಮೂಡಿಸುತ್ತವೆ ಎಂದರು. ಇರಕಲ್‌ನ ಬಸವಯೋಗ ಮಂಟಪದ ಬಸವಪ್ರಸಾದ ಸ್ವಾಮೀಜಿ ಮಾತನಾಡಿ, ಮಠ ಮಾನ್ಯಗಳು ಬದ್ಧತೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದು ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತಿವೆ ಎಂದರು.

ಕಳೆದ ಹತ್ತು ದಿನಗಳಿಂದ ಉಪವಾಸ ಮತ್ತು ಮೌನ ಅನುಷ್ಠಾನ ಕೈಗೊಂಡಿದ್ದ ಮಠದ ಗೌರಮ್ಮ ಅಮ್ಮನವರನ್ನು ಸನ್ಮಾನಿಸಿ ಉಪವಾಸ ವೃತ ಬಿಡಿಸಲಾಯಿತು. ವಟಗಲ್ ಗ್ರಾಮದ ಪಾರ್ವತಮ್ಮ ಶರಣಪ್ಪ, ಗುಡಿಹಾಳದ ದೇವಮ್ಮ ಬಸ್ಸಣ್ಣ, ಅಮೀನಗಡದ ಶಕೀಲಾಭಾನು ಮಹ್ಮದ್ ಶಫೀಕ್ ಮತ್ತು ದೇವತಗಲ್ ಗ್ರಾಮದ ಪದ್ದಮ್ಮ ಯಂಕಣ್ಣ ನಡಗಿನಮನಿ ಕೃಷಿಕ ದಂಪತಿಗೆ ಮಠದ ವತಿಯಿಂದ `ಕಾಯಕ ಶ್ರೇಷ್ಠ~ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.

 ನವಲಕಲ್ ಬೃಹನ್ಮಠದ ಅಭಿನವ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ, ಶರಣಯ್ಯಸ್ವಾಮಿ ಹುನುಕುಂಟಿ, ರುದ್ರಮುನಿ ದೇವರು ಗಚ್ಚಿನಮಠ ಮಸ್ಕಿ, ದಂಡಗುಂಡಪ್ಪ ತಾತ, ಚಂದ್ರಮೌನೇಶ ತಾತ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಜೆ.ಶರಣಪ್ಪಗೌಡ, ಸಿಂಧನೂರು ಬಿಇಒ ವೃಷಭೇಂದ್ರಯ್ಯ, ಮಾನ್ವಿ ಬಿಇಒ ಎನ್.ವಿ.ಸ್ವಾಮಿ, ಕೆ.ಎಸ್. ವೀರಭದ್ರಯ್ಯಸ್ವಾಮಿ, ಉಪನ್ಯಾಸಕ ಟಿ.ಎಸ್.ಕುಮಾರಸ್ವಾಮಿ ಇತರರು ಉಪಸ್ಥಿತರಿದ್ದರು. ಶಿಕ್ಷಕ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.