ADVERTISEMENT

ಸುನೀತಾ ಪತ್ತೆಗೆ ಒತ್ತಾಯಿಸಿ ಮತಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ಮಂಗಳೂರು: ತಾಲ್ಲೂಕಿನ ಹರೇಕಳ ಗ್ರಾಮದ ತೋಕರೆಬೆಟ್ಟು ಗ್ರಾಮದ ನಿವಾಸಿ, ದಲಿತ ವಿಧವೆ ಸುನೀತಾ 2011ರ ಅಕ್ಟೋಬರ್ 24ರಿಂದ ನಾಪತ್ತೆಯಾಗಿದ್ದು, ಆಕೆಯನ್ನು ಪತ್ತೆ ಮಾಡುವಲ್ಲಿ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಶೀಘ್ರವಾಗಿ ಪತ್ತೆ ಮಾಡಿಕೊಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು  ದಲಿತ ಹಕ್ಕುಗಳ ಹೋರಾಟ ಸಮಿತಿ ಹಾಗೂ ಸಿಪಿಎಂ ಕರ್ಯಕರ್ತರು ಸೋಮವಾರ ಮತ ಪ್ರದರ್ಶನ ನಡೆಸಿದರು.

ದಲಿತ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಕೊಂಚಾಡಿ ಮಾತನಾಡಿ, ಮೂರು ಮಕ್ಕಳ ತಾಯಿಯಾದ ಸುನೀತಾ ಅವರೇ ಕುಟುಂಬದ ಏಕಮಾತ್ರ ಆದಾಯದ ಮೂಲವಾಗಿದ್ದರು. ಅವರ ದುಡಿಮೆಯಿಂದಲೇ ಕುಟುಂಬದ ಜೀವನ ಸಾಗುತ್ತಿತ್ತು. ಆಕೆ ನಾಪತ್ತೆ ಆಗಿರುವುದರಿಂದ ಆಧಾರ ಸ್ತಂಭವೇ ಕುಸಿದಂತಾಗಿದ್ದು, ಕುಟುಂಬದವರು ಕಂಗಾಲಾಗಿದ್ದಾರೆ ಎಂದು ಸಮಸ್ಯೆಯ ಚಿತ್ರಣ ನೀಡಿದರು.

ಕುಟುಂಬ ಸದಸ್ಯರು ದೂರು ನೀಡಿ ವಾರಗಳೇ ಕಳೆದಿದ್ದರೂ, ಪೊಲೀಸರು ಆಕೆಯ ಶೋಧಕ್ಕೆ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಪ್ರಕರಣದಲ್ಲಿ ಪೊಲೀಸರು ಬಹಳ ನಿರ್ಲಕ್ಷ ತೋರುತ್ತಿದ್ದು, ದಲಿತ ಕುಟುಂಬಕ್ಕೆ ಅನ್ಯಾಯವಾಗುತ್ತಿದೆ ಎಂದು ಗಮನ ಸೆಳೆದರು.

ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಆದರೆ ಈವರೆಗೂ ಪ್ರಕರಣ ತನಿಖೆ ಚುರುಕುಗೊಳಿಸಿಲ್ಲ. ಸುನೀತಾ ನಾಪತ್ತೆ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ಬಗ್ಗೆ ಮೇಲಾಧಿಕಾರಿಗಳು ತ್ವರಿತ ಗತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸಮಿತಿ ಕಾರ್ಯದರ್ಶಿ ಕೆ.ಕೃಷ್ಣಪ್ಪ ಸಾಲಿಯಾನ್, ಅಧ್ಯಕ್ಷ ನಾರಾಯಣ ತಲಪಾಡಿ, ಕಾರ್ಯದರ್ಶಿ ರೋಹಿದಾಸ್ ಅಬ್ಬಂಜರ, ಸಿಪಿಎಂನ ವಸಂತ ಆಚಾರಿ, ಲಿಂಗಪ್ಪ ನಂತೂರು, ಪದ್ಮಾವತಿ ಶೆಟ್ಟಿ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.