ADVERTISEMENT

ಸೋದೆ ವಾದಿರಾಜ ಮಠದ ಭಕ್ತವೃಂದ ಮನವಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ಉಡುಪಿ: `ಗುರುಗಳಾದ ವಿಶ್ವೋತ್ತಮ ತೀರ್ಥ ಸ್ವಾಮೀಜಿ ನಡೆಸಿದ ಸತ್ಸಂಪ್ರದಾಯದಂತೆ ಮಧ್ವಾಚಾರ್ಯರು ಮತ್ತು ವಾದಿರಾಜ ಸ್ವಾಮಿಗಳು ಹಾಕಿಕೊಟ್ಟ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಹಾಗೂ ಮಠದ ನಿಯಮಾವಳಿಗಳಿಗೆ ಇತರರ ಹಸ್ತಕ್ಷೇಪಕ್ಕೆ ಆಸ್ಪದ ಕೊಡದೇ ಎಲ್ಲ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕು~ ಎಂದು ಸೋದೆ ವಾದಿರಾಜ ಮಠದ ಭಕ್ತವೃಂದ ಭಾವಿ ಪರ್ಯಾಯ ಪೀಠಾಧೀಶ ವಿಶ್ವವಲ್ಲಭ ತೀರ್ಥರಿಗೆ ಬುಧವಾರ ಮನವಿ ಸಲ್ಲಿಸಿದೆ.

`ಅಷ್ಟ ಮಠಗಳ ಹಿರಿಯ ಯತಿಗಳ ಮಾರ್ಗದರ್ಶನದಂತೆ ಮುಂದಿನ 2 ವರ್ಷ ಪರ್ಯಾಯ ನಡೆಸಿಕೊಂಡು ಹೋಗಬೇಕು. ಪೂರ್ವ ನಿರ್ಧರಿತ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕು~ ಎಂದು ಭಕ್ತವೃಂದ ಮನವಿಯಲ್ಲಿ ಒತ್ತಾಯಿಸಿದೆ.

 ಮಠದ ಸ್ವಾಗತ ಸಮಿತಿ ಕಚೇರಿ ಮೇಲ್ವಿಚಾರಕ ಕೃಷ್ಣ ಆಚಾರ್ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಮುಖಂಡರಾದ ಯಶಪಾಲ ಸುವರ್ಣ, ಕೊಡವೂರು ದಿವಾಕರಶೆಟ್ಟಿ ಜತೆಯಲ್ಲಿದ್ದರು.

 ಇದಕ್ಕೂ ಮುನ್ನ ನಗರದಲ್ಲಿ ಮಂಗಳವಾರ ಸಭೆ ಸೇರಿದ್ದ ಶ್ರೀಕೃಷ್ಣ ಮುಖ್ಯಪ್ರಾಣ ಭಕ್ತವೃಂದ, ಹಿಂದೂ ಸಮಾಜ ನಾಗರಿಕ ಸಮಿತಿ `ಜ.18ರಂದು ನಡೆಯುವ ಸೋದೆ ವಾದಿರಾಜ ಮಠದ ಪರ್ಯಾಯಮಹೋತ್ಸವದಲ್ಲಿ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿಯನ್ನೂ ಸೇರಿಸಿಕೊಳ್ಳಬೇಕು~ ಎಂದು ಆಗ್ರಹಿಸಿ ಬಳಿಕ ಸೋದೆ ಮಠಕ್ಕೆ ತೆರಳಿ ಮನವಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.