ADVERTISEMENT

ಹಣ ವಸೂಲಿ: ಸಬ್‌ಇನ್ಸ್‌ಪೆಕ್ಟರ್ ಸೆರೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2011, 19:30 IST
Last Updated 29 ಆಗಸ್ಟ್ 2011, 19:30 IST
ಹಣ ವಸೂಲಿ: ಸಬ್‌ಇನ್ಸ್‌ಪೆಕ್ಟರ್ ಸೆರೆ
ಹಣ ವಸೂಲಿ: ಸಬ್‌ಇನ್ಸ್‌ಪೆಕ್ಟರ್ ಸೆರೆ   

ಕುಣಿಗಲ್: ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಎಂದು ಸುಳ್ಳು ಹೇಳಿ ವ್ಯಾಪಾರಿಯನ್ನು ಬೆದರಿಸಿ ಹಣ ವಸೂಲಿ ಮಾಡಿದ್ದ ಸಬ್‌ಇನ್ಸ್‌ಪೆಕ್ಟರ್ ಬಿ.ನಾರಾಯಣ್ ಎಂಬುವರನ್ನು ಬಂಧಿಸಿರುವ ಘಟನೆ ಭಾನುವಾರ ರಾತ್ರಿ ತಾಲ್ಲೂಕಿನ ಬೋರಲಿಂಗನಪಾಳ್ಯ ಗ್ರಾಮದಲ್ಲಿ ನಡೆದಿದೆ.

ನಾರಾಯಣ್ ತಾಲ್ಲೂಕಿನ ಗುನ್ನಾಗರೆ ಗ್ರಾಮದ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ವಿಐಪಿ ಭದ್ರತಾ ಪಡೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈಚೆಗೆ ತನ್ನ ಸ್ನೇಹಿತರೊಂದಿಗೆ ಸ್ವಗ್ರಾಮಕ್ಕೆ ಬಂದು ಸಮೀಪದ ಬೋರಲಿಂಗನಪಾಳ್ಯದ ಮದ್ಯದ ಅಂಗಡಿಗೆ ಹೋಗಿದ್ದರು. ಅಲ್ಲಿ ಮಾಗಡಿ ಸುನಿಲ್ ಎಂಬುವವರು ಗಂಧದಕಡ್ಡಿ ಸಗಟು ವ್ಯಾಪಾರ ಮಾಡುತ್ತಿದ್ದ ಸಮಯದಲ್ಲಿ ತಾವು ವಾಣಿಜ್ಯ ತೆರಿಗೆ ಅಧಿಕಾರಿ ಎಂದು ಹೇಳಿಕೊಂಡು ವ್ಯಾಪಾರ ಮಾಡಲು ತಂದಿರುವ ಪದಾರ್ಥಗಳ ದಾಖಲೆ ನೀಡುವಂತೆ ಒತ್ತಾಯಿಸಿದರು.
 
ಅನುಮಾನಗೊಂಡ ವ್ಯಾಪಾರಿ ಗುರುತಿನ ಪತ್ರ ತೋರಿಸುವಂತೆ ಕೇಳಿದಾಗ ಪೊಲೀಸ್ ಇಲಾಖೆ ಗುರುತಿನ ಪತ್ರವನ್ನೆ ತೋರಿಸಿ ರೂ 15 ಸಾವಿರ ನೀಡುವಂತೆ ಬೆದರಿಸಿದ್ದಾರೆ. ಕೊನೆಗೆ ಬಲವಂತವಾಗಿ ಆತನ ಬಳಿ ಇದ್ದ ಒಂದು ಸಾವಿರ ಪಡೆದು, ಹೆಚ್ಚಿನ ಹಣ ತರುವಂತೆ ದಬಾಯಿಸಿದ್ದರು.

ವ್ಯಾಪಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪಿಎಸ್‌ಐ ಚನ್ನಯ್ಯ ಹಿರೇಮಠ್ ಪ್ರಕರಣ ದಾಖಲಿಸಿ ಆರೋಪಿ ಬಿ.ನಾರಾಯಣ್‌ನನ್ನು ಗುನ್ನಾಗರೆಯಲ್ಲಿ ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.