ADVERTISEMENT

ಹಳಿ ತಪ್ಪಿದ ರೈಲು ಪ್ರಯಾಣಿಕರು ಪಾರು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 19:30 IST
Last Updated 2 ಆಗಸ್ಟ್ 2012, 19:30 IST

ಹುಬ್ಬಳ್ಳಿ: ಕೊಲ್ಹಾಪುರದಿಂದ ತಿರುಪತಿಗೆ ಹೊರಟಿದ್ದ ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ:17416) ಗುರುವಾರ ಇಲ್ಲಿನ ರಾಯಾಪುರ ಬಳಿ ಹಳಿ ತಪ್ಪಿತು.

ಧಾರವಾಡದಿಂದ ಹುಬ್ಬಳ್ಳಿಯತ್ತ ಹೊರಟಿದ್ದ ರೈಲು ಸಂಜೆ 6.45ರ ವೇಳೆ ಹಳಿ ತಪ್ಪಿದೆ. ಎಂಜಿನ್‌ನ 2 ಚಕ್ರಗಳು ಹಳಿ ತಪ್ಪಿ ಸುಮಾರು 200 ಮೀಟರ್ ಉಜ್ಜಿಕೊಂಡು ಹೋಗಿ ನಿಂತಿದೆ. ಇದರಿಂದ ಹಳಿ ಕಿತ್ತು ಹೋಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ರೈಲ್ವೆ ಅಧಿಕಾರಿಗಳು ಕ್ರೇನ್ ಬಳಸಿ ಎಂಜಿನ್ ಹಾಗೂ ಹಳಿಯ ದುರಸ್ತಿ ಕಾರ್ಯಾಚರಣೆ ಕೈಗೊಂಡರು. ಆದರೆ  ಮಳೆಯಿಂದಾಗಿ ಪ್ರಯಾಣಿಕರು ರೈಲಿನಿಂದ ಕೆಳಗೆ ಇಳಿಯಲು ಆಗಲಿಲ್ಲ.

ರಾಯಾಪುರ ಮಾರ್ಗ ಜೋಡಿ ಪಥವಾಗಿದ್ದು, ಬೇರೆ ರೈಲುಗಳ ಸಂಚಾರಕ್ಕೆ ಅಡಚಣೆಯಾಗಿಲ್ಲ. ತಿರುಪತಿಗೆ ತೆರಳುವ ಪ್ರಯಾಣಿಕರಿಗೆ ಪರ್ಯಾಯ ರೈಲಿನ ವ್ಯವಸ್ಥೆ ಕಲ್ಪಿಸುವುದಾಗಿ ಸ್ಥಳದಲ್ಲಿದ್ದ ರೈಲ್ವೆ ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.