ADVERTISEMENT

ಹಳಿ ತಪ್ಪಿದ ಹುಬ್ಬಳ್ಳಿ- ಮಿರಜ್ ಪ್ಯಾಸೆಂಜರ್ ರೈಲು, 27ಕ್ಕೂ ಹೆಚ್ಚು ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 19:05 IST
Last Updated 1 ಅಕ್ಟೋಬರ್ 2012, 19:05 IST
ಹಳಿ ತಪ್ಪಿದ ಹುಬ್ಬಳ್ಳಿ- ಮಿರಜ್ ಪ್ಯಾಸೆಂಜರ್ ರೈಲು, 27ಕ್ಕೂ ಹೆಚ್ಚು ಮಂದಿಗೆ ಗಾಯ
ಹಳಿ ತಪ್ಪಿದ ಹುಬ್ಬಳ್ಳಿ- ಮಿರಜ್ ಪ್ಯಾಸೆಂಜರ್ ರೈಲು, 27ಕ್ಕೂ ಹೆಚ್ಚು ಮಂದಿಗೆ ಗಾಯ   

ಬೆಳಗಾವಿ: ಹುಬ್ಬಳ್ಳಿ- ಮಿರಜ್ ಪ್ಯಾಸೆಂಜರ್ ರೈಲಿನ ಎಂಜಿನ್ ಮತ್ತು ನಾಲ್ಕು ಬೋಗಿಗಳು ಹಳಿ ತಪ್ಪಿದ್ದರಿಂದ 27ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಸುಳೇಭಾವಿ- ಸುಣಧಾಳ ಮಧ್ಯದ ತಾಲ್ಲೂಕಿನ ಕರಿಕಟ್ಟಿ ಸಮೀಪದ ಮಾನವ ರಹಿತ ಲೆವೆಲ್ ಕ್ರಾಸಿಂಗ್ ಹತ್ತಿರ ಸೋಮವಾರ ಸಂಜೆ 5.30ಕ್ಕೆ ಸಂಭವಿಸಿದೆ. ಗಾಯಗೊಂಡವರಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಿದೆ.

ಕಳೆದ ಮೂರ‌್ನಾಲ್ಕು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವುದರಿಂದ ರೈಲು ಹಳಿ ಕೆಳಗಿನ ಚಿಕ್ಕ ಸೇತುವೆಯಲ್ಲಿ ಭಾರಿ ನೀರು ಹರಿದಿದೆ. ನೀರಿನ ಜೊತೆಗೆ ಮಣ್ಣು ಕೊಚ್ಚಿಹೋಗಿದ್ದರಿಂದ ರೈಲು ಹಳಿ ಸಹ ಕುಸಿದಿದ್ದು ಅಪಘಾತಕ್ಕೆ ಕಾರಣ ಎಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಹಾಗೂ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಹುಬ್ಬಳ್ಳಿ- ಮಿರಜ್ (ರೈಲು ಸಂಖ್ಯೆ- 51420) ಪ್ಯಾಸೆಂಜರ್ ರೈಲು ಹಳಿ ತಪ್ಪಿದ್ದು, ಎಂಜಿನ್ ಪಲ್ಟಿಯಾಗಿದೆ. ನಾಲ್ಕು ಬೋಗಿಗಳು ಹಳಿಯಿಂದ ಅನತಿ ದೂರದಲ್ಲಿ ತೆರಳಿ ಒಂದೇ ಬದಿಗೆ ವಾಲಿ ನಿಂತಿವೆ. ಉಳಿದ ಮೂರು ಬೋಗಿಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಈ ಬೋಗಿಗಳನ್ನು ಮತ್ತೊಂದು ಎಂಜಿನಿನ ಸಹಾಯದಿಂದ ಬೆಳಗಾವಿಗೆ ತರಲಾಗಿದೆ. ಹಳಿ ಬಿಟ್ಟು ವಾಲಿರುವ ನಾಲ್ಕು ಬೋಗಿಗಳ ಪೈಕಿ ಒಂದು ಲಗೇಜ್ ಬೋಗಿಯಿದ್ದು, ಉಳಿದ ಬೋಗಿಗಳಲ್ಲಿ ಪ್ರಯಾಣಿಕರಿದ್ದರು.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ರೈಲ್ವೆ ಗ್ಯಾಂಗ್‌ಮನ್ ರಾಮಪ್ಪ ಹಾದಿಮನಿ ಅವರನ್ನು ಕೆಎಲ್‌ಇ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈತನ ಎರಡೂ ಕಾಲುಗಳು ಬೋಗಿಯ ಕೆಳಗೆ ಸಿಕ್ಕಿದ್ದವು. ಅಗ್ನಿಶಾಮಕ ದಳದವರು ಕ್ರೇನ್ ಮೂಲಕ ಬೋಗಿ ಮೇಲಕ್ಕೆತ್ತಿ ಈತನನ್ನು ರಕ್ಷಿಸಿದರು.

ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಅಧಿಕಾರಿಗಳು ಸಹ ರೈಲ್ವೆ ಬೋಗಿಗಳ ಕೆಳಗೆ ಸಿಕ್ಕಿ ಮೃತಪಟ್ಟಿರಬಹುದು ಎಂದು ಶಂಕಿಸಿದ್ದರು. ಆದರೆ ಬೋಗಿಗಳನ್ನು ಕ್ರೇನ್ ಸಹಾಯದ ಮೂಲಕ ಮೇಲೆತ್ತಿದ ನಂತರ ಯಾವುದೇ ಸಾವು ಸಂಭವಿಸಿಲ್ಲ ಎಂಬುದು ಗೊತ್ತಾಯಿತು.

ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ಗಾಯಗೊಂಡಿರುವ 27 ಮಂದಿ ಪೈಕಿ 22 ಪ್ರಯಾಣಿಕರನ್ನು ಜಿಲ್ಲಾ ಆಸ್ಪತ್ರೆಗೆ, ಲೇಕ್ ವ್ಯೆವ್ ಆಸ್ಪತ್ರೆ ಇಬ್ಬರು, ಕೆಎಲ್‌ಇ ಹಾಗೂ ವಿಜಯಾ ಆಸ್ಪತ್ರೆಗೆ ಒಬ್ಬ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮೂವರ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ಗ್ಯಾಂಗಮನ್ ಹಾದಿಮನಿ ಅವರ ಸ್ಥಿತಿ ಚಿಂತಾಜನಕವಿದೆ.

ಅಗ್ನಿಶಾಮಕ ದಳದವರು, ಪೊಲೀಸರು ಪರಿಹಾರ ಕಾರ್ಯ ನಡೆಸಿದರು. ಸ್ಥಳೀಯ ಗ್ರಾಮಗಳ ಯುವಕರು ಪರಿಹಾರ ಕಾರ್ಯಕ್ಕೆ ಕೈಜೋಡಿಸಿದರು. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿ.ಶಂಕರ, ಪಾಲಿಕೆ ಆಯುಕ್ತೆ ಪ್ರಿಯಾಂಕಾ ಫ್ರಾನ್ಸಿಸ್ ಹಾಗೂ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಪರಿಹಾರ ಕಾರ್ಯಕ್ಕಾಗಿ ಮಿಲಿಟರಿ ಸಹಾಯ ಕೇಳಲಾಗಿದ್ದು, 40 ಮಂದಿ ಯೋಧರ ತಂಡ ಘಟನಾ ಸ್ಥಳಕ್ಕೆ ಬರಲಿದೆ ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ತಿಳಿಸಿದರು. 

ಪರಿಹಾರ: ~ಬೆಳಗಾವಿ ತಾಲ್ಲೂಕಿನ ಕರಿಕಟ್ಟಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದ ರೈಲು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ತಲಾ 1 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 25 ಸಾವಿರ ರೂಪಾಯಿ ಪರಿಹಾರ ಧನ ನೀಡಲಾಗುವುದು~ ಎಂದು ರೈಲ್ವೆ ಇಲಾಖೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.

ರೈಲು ರದ್ದು
ಮೀರಜ್-ಬೆಳಗಾವಿ ಪ್ಯಾಸೆಂಜರ್, ಮೀರಜ್-ಕ್ಯಾಸಲ್‌ರಾಕ್ ಪ್ಯಾಸೆಂಜರ್ ರೈಲನ್ನು ಸೋಮವಾರ ರದ್ದುಗೊಳಿಸಿದ್ದು ,  ರಾಣಿ ಚನ್ನಮ್ಮ ರೈಲನ್ನು ಸೋಮವಾರ ರಾತ್ರಿ ಘಟಪ್ರಭಾ ನಿಲ್ದಾಣದಲ್ಲಿಯೇ ನಿಲ್ಲಿಸಲಾಗಿದೆ. ಹುಬ್ಬಳ್ಳಿ- ನಿಜಾಮುದ್ದೀನ್ ಲಿಂಕ್ ಎಕ್ಸ್‌ಪ್ರೆಸ್ ಸೋಮವಾರ ವಿಜಾಪುರ ಮೂಲಕ ಪ್ರಯಾಣಿಸಿದೆ. ಮುಂಬೈ-ಕುರ್ಲಾ-ಯಶವಂತಪುರ ರೈಲು ಮಾರ್ಗ ಬದಲಾವಣೆ ಮಾಡಲಾಗಿದೆ. ರಾಣಿ ಚೆನ್ನಮ್ಮಾ ಎಕ್ಸ್‌ಪ್ರೆಸ್ ರೈಲು ಮಂಗಳವಾರ ಮುಂಜಾನೆ ಬೆಳಗಾವಿವರೆಗೆ ಮಾತ್ರ ಪ್ರಯಾಣಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT