ADVERTISEMENT

ಹಿರಿಯರನ್ನು ಪೂಜಿಸಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 19:30 IST
Last Updated 19 ನವೆಂಬರ್ 2012, 19:30 IST

ಹುಬ್ಬಳ್ಳಿ: “ದೇವರನ್ನು ಪೂಜಿಸಲು ಮರೆತರೂ ಪರವಾಗಿಲ್ಲ. ತ್ಯಾಗ ಮಾಡಿ, ದಾರಿ ತೋರಿದ ಹಿರಿಯರನ್ನು ಗೌರವಿಸಲು ಮರೆಯಬಾರದು” ಎಂದು ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ನಗರದ ಬಿವಿಬಿ ಕಾಲೇಜು ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕೆಎಲ್‌ಇ ಸೊಸೈಟಿಯ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

“ಸಮಾಜದಲ್ಲಿ ಈಚೆಗೆ ಕೃತಜ್ಞತಾ ಭಾವ ಕಡಿಮೆಯಾಗುತ್ತಿದೆ. ತಂದೆಯ ಋಣವನ್ನೇ ಮರೆಯುವ ಮಗ, ಗುರುವಿಗೆ ಬೆಲೆ ನೀಡದ ಶಿಷ್ಯಂದಿರು ಇಂದು ಎಲ್ಲ ಕಡೆ ಕಾಣಸಿಗುತ್ತಾರೆ. ಬಹುತೇಕರು ತಮ್ಮ  ದಾರಿಯನ್ನು ಕಂಡ ಕೂಡಲೇ ಕೈ ಹಿಡಿದವರನ್ನು ಮರೆಯುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಕೆಎಲ್‌ಇ ಸೊಸೈಟಿ, ಸಂಸ್ಥಾಪಕರನ್ನು ಪ್ರತಿವರ್ಷ ನೆನೆಯುತ್ತಿರುವುದು ಶ್ಲಾಘನೀಯ” ಎಂದರು.

“ಕೆಎಲ್‌ಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸಪ್ತರ್ಷಿಗಳ ಸಾಮಾಜಿಕ ಕಾಳಜಿಯಿಂದಾಗಿ ಇಂದು ಅನೇಕ ವಿದ್ಯಾರ್ಥಿಗಳಿಗೆ ವಿದ್ಯೆ, ನೂರಾರು ಮಂದಿಗೆ ಉದ್ಯೋಗ ಲಭಿಸಿದೆ. ವಿದ್ಯೆ ಬಹುದೊಡ್ಡ ಸಂಪತ್ತು. ಅದನ್ನು ದೋಚಿಕೊಂಡು ಹೋಗಲು ಯಾರಿಗೂ ಸಾಧ್ಯ ಇಲ್ಲ. ಯಾರನ್ನೂ ನೆನೆಯದೇ ನಿಜವಾದ ಮನುಷ್ಯನಾಗಲು ಯಾರಿಗೂ ಸಾಧ್ಯವಿಲ್ಲ” ಎಂದು ಸ್ವಾಮೀಜಿ ಹೇಳಿದರು.

ಪಿ.ಸಿ.ಜಾಬಿನ್ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ.ವಿ.ಬಿ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಕೆಎಲ್‌ಇ ಸೊಸೈಟಿಯ ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ   ನಿವೃತ್ತರಾದ 16 ಮಂದಿ ಹಾಗೂ ಪಿಎಚ್.ಡಿ ಪಡೆದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಜೆ.ಜಿ.ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಆನಂದ ಮುಳಗುಂದ ಸ್ವಾಗತಿಸಿದರು. ಶ್ರೀ ಕಾಡಸಿದ್ಧೇಶ್ವರ ಕಲಾ ಹಾಗೂ ಎಚ್.ಎಸ್.ಕೋತಂಬ್ರಿ ವಿಜ್ಞಾನ ಸಂಸ್ಥೆಯ ಪ್ರಾಚಾರ್ಯ ಡಾ. ಎಂ.ಟಿ. ಕುರಣಿ ವಂದಿಸಿದರು. ಡಾ. ಜಯಶ್ರೀ ಹಿರೇಮಠ ಹಾಗೂ ಡಾ.ಅನ್ನಪೂರ್ಣ ಜಾಲವಾದಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.