ADVERTISEMENT

4 ದಶಕಗಳ ವಿವಾದ ನಾಲ್ಕೇ ನಿಮಿಷಗಳಲ್ಲಿ ಇತ್ಯರ್ಥ!

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 19:30 IST
Last Updated 22 ಆಗಸ್ಟ್ 2012, 19:30 IST

ಶ್ರೀರಂಗಪಟ್ಟಣ: ಇದು ಅಚ್ಚರಿ ಆದರೂ ಸತ್ಯ. ತಾಲ್ಲೂಕಿನ ಮಲ್ಲೇಗೌಡನಕೊಪ್ಪಲು ಗ್ರಾಮದ 4 ದಶಕಗಳ ರಸ್ತೆ ವಿವಾದ ನಾಲ್ಕೇ ನಿಮಿಷಗಳಲ್ಲಿ ಬಗೆಹರಿದ ಅಪರೂಪದ ಪ್ರಕರಣ ಬುಧವಾರ ನಡೆಯಿತು.

ಗ್ರಾಮದಿಂದ ಬೆಂಗಳೂರು- ಮೈಸೂರು ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ವಿವಾದ ಕಳೆದ ನಲವತ್ತು ವರ್ಷಗಳಿಂದ ನಡೆಯುತ್ತಿತ್ತು. ಮೂರೂವರೆ ಅಡಿ ರಸ್ತೆಯಲ್ಲಿ ಎತ್ತಿನಗಾಡಿ ಹಾಗೂ ವಾಹನಗಳು ಸಂಚರಿಸಲು ಸಾಧ್ಯವಾಗದೆ ಬವಣೆಪಡುವ ಸ್ಥಿತಿ ಇತ್ತು. ರಸ್ತೆ ಎಂಬುದು ಕೊಳಚೆ ಗುಂಡಿಯಾಗಿ ಮಾರ್ಪಟ್ಟಿತ್ತು.

ಅಂಗನವಾಡಿ ಮಕ್ಕಳು ಕೆಸರು ತುಳಿದುಕೊಂಡು ಓಡಾಡುತ್ತಿದ್ದರು. ಇದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಆನಂದ್, ಸದಸ್ಯರಾದ ಶಿವಕುಮಾರ್ ಇತರರು ಸುತ್ತಮುತ್ತಲ ಗ್ರಾಮಗಳ ಹಿರಿಯರನ್ನು ಸೇರಿಸಿ ಪಂಚಾಯಿತಿ ಮೂಲಕ ಸಮಸ್ಯೆ ಇತ್ಯರ್ಥಗೊಳಿಸಿದ್ದಾರೆ. ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ಸಬ್ಬನಕುಪ್ಪೆ ಮಂಡಲ ಪಂಚಾಯಿತಿ ಮಾಜಿ ಪ್ರಧಾನರಾದ ಜಯರಾಂ, ರೈಸ್‌ಮಿಲ್ ನಾಗರಾಜು ಇತರರು ಜಟಿಲ ಸಮಸ್ಯೆ ಬಗೆಹರಿಸಲು ನೆರವಾದರು.

ಮಲ್ಲೇಗೌಡನಕೊಪ್ಪಲುವಿನ ಅಂದಾನಿಗೌಡ ಅವರ ಮಗ ನಂಜೇಗೌಡ ಎಂಬವರು ರಸ್ತೆಯನ್ನು ಅತಿಕ್ರಮಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ರಸ್ತೆ ಎಂದು ಹೇಳುತ್ತಿರುವ ಜಾಗ ನನ್ನ ಸ್ವಂತದ್ದು. ಅದಕ್ಕೆ ದಾಖಲೆ ಇದೆ ಎಂದು ನಂಜೇಗೌಡ ವಾದಿಸುತ್ತಲೇ ಬಂದಿದ್ದರು. ಈ ವಿವಾದ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರೂ ಬಗೆಹರಿದಿರಲಿಲ್ಲ. ನಂಜೇಗೌಡ ಮತ್ತು ಊರಿನವರ ನಡುವೆ ಸತತ 40 ವರ್ಷಗಳಿಂದ ಹಗ್ಗ ಜಗ್ಗಾಟ ನಡೆದಿತ್ತು. ಪಂಚಾಯಿತಿದಾರರ ಮಾತಿಗೆ ಒಪ್ಪಿದ ನಂಜೇಗೌಡ ರಸ್ತೆಗೆ ಜಾಗ ಬಿಟ್ಟುಕೊಡಲು ಕಡೆಗೂ ಸಮ್ಮತಿ ಸೂಚಿಸಿದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶಿವಕುಮಾರ್ 100 ಅಡಿ ಉದ್ದ ಹಾಗೂ 30 ಅಡಿ ಅಗಲದ ರಸ್ತೆಯ ಅಳತೆ ನಡೆಸಿ, ಹದ್ದುಬಸ್ತು ಗೊತ್ತುಪಡಿಸಿದರು. ನಂತರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಕೂಡ ನೆರವೇರಿತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.