ADVERTISEMENT

ಉದ್ಯಮಿ, ವೈದ್ಯರಿಗೆ ಟಿಕೆಟ್‌ ಕೊಟ್ಟರೆ ಬೆಂಬಲ ಇಲ್ಲ

ಜೆಡಿಎಸ್‌ ಹಿರಿಯ ಮುಖಂಡರಾದ ಅಂಬುಜಮ್ಮ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 9:27 IST
Last Updated 11 ಜನವರಿ 2018, 9:27 IST

ಮಂಡ್ಯ: ‘ಕ್ಷೇತ್ರದಲ್ಲಿ ಜೆಡಿಎಸ್‌ ಸಂಘಟನೆಗೆ ದುಡಿಯುತ್ತಿರುವ ಹಿರಿಯ ಮುಖಂಡರಿಗೆ ಪಕ್ಷ ಟಿಕೆಟ್‌ ನೀಡಬೇಕು. ಇತ್ತೀಚೆಗೆ ಪಕ್ಷಕ್ಕೆ ಬಂದಿರುವ ಕೆ.ಕೆ.ರಾಧಾಕೃಷ್ಣ ಸೇರಿ ಉದ್ಯಮಿಗಳು, ವೈದ್ಯರು, ಚಿತ್ರನಟರು, ವೃತ್ತಿನಿರತರಿಗೆ ಟಿಕೆಟ್‌ ನೀಡಿದರೆ ನಮ್ಮ ಬೆಂಬಲ ಸಿಗುವುದಿಲ್ಲ’ ಎಂದು ಪಕ್ಷದ ಹಿರಿಯ ಮುಖಂಡರಾದ ಅಂಬುಜಮ್ಮ ಹೇಳಿದರು.

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನೂ ಟಿಕೆಟ್‌ ಆಕಾಂಕ್ಷಿ. ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗೆ ಶ್ರಮಿಸಿರುವ, ಜನರ ಸಮಸ್ಯೆಗಳಿಗೆ ಹೋರಾಟ ಮಾಡಿರುವ ಹಿರಿಯರಿಗೆ ಟಿಕೆಟ್‌ ಸಿಗಬೇಬೇಕು. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು ಯಾರಿಗೇ ಟಿಕೆಟ್‌ ನೀಡಿದರೆ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ. ಆದರೆ ಇತ್ತೀಚೆಗೆ ಪಕ್ಷಕ್ಕೆ ಬಂದಿರುವವರಿಗೆ, ಒಂದು ಕ್ಷೇತ್ರದ ವೃತ್ತಿನಿರತರಿಗೆ, ರಿಯಲ್‌ ಎಸ್ಟೇಟ್‌ ಮಾಡುವವರಿಗೆ, ವೈದ್ಯರಿಗೆ ಟಿಕೆಟ್‌ ನೀಡಬಾರದು’ ಎಂದು ಹೇಳಿದರು.

ಒಂದೇ ಕುಟುಂಬದ ಸದಸ್ಯರು: ಮುಖಂಡ ಜಿ.ಬಿ.ಶಿವಕುಮಾರ್‌ ಮಾತನಾಡಿ ‘ಟಿಕೆಟ್‌ ಆಕಾಂಕ್ಷಿಗಳು ಒಂದೇ ಕುಟುಂಬದ ಸದಸ್ಯರಂತಿದ್ದೇವೆ. ಕ್ಷೇತ್ರದಲ್ಲಿ ಸಮೀಕ್ಷೆ ನಡೆಯುತ್ತಿದ್ದು ಜನಾಭಿಪ್ರಾಯಕ್ಕೆ ಮನ್ನಣೆ ಸಿಗಲಿದೆ. ನಮ್ಮ ಮುಖಂಡರಾದ ಎಚ್‌.ಡಿ.ಕುಮಾರಸ್ವಾಮಿ ಅವರು ಜನರ ನಡುವೆ ಇದ್ದು ಕೆಲಸ ಮಾಡುವವರಿಗೆ ಟಿಕೆಟ್‌ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ನಾವು ಎಷ್ಟೇ ಜನ ಟಿಕೆಟ್‌ ಆಕಾಂಕ್ಷಿಗಳು ಇದ್ದರೂ ಜನರು ಹಾಗೂ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ಸಿಗಲಿದೆ. ನಮ್ಮಲ್ಲಿ ಯಾರಿಗೆ ಟಿಕೆಟ್‌ ನೀಡಿದರೂ ಒಟ್ಟಾಗಿ ಪಕ್ಷಕ್ಕೆ ಕೆಲಸ ಮಾಡುತ್ತೇವೆ. ನಮಗೆ ವ್ಯಕ್ತಿಗಿಂತ ಪಕ್ಷವೇ ಮುಖ್ಯ’ ಎಂದು ಹೇಳಿದರು.

ADVERTISEMENT

‘ಟಿಕೆಟ್‌ ಆಕಾಂಕ್ಷಿಗಳೆಲ್ಲರೂ ವಿವಿಧತೆಯಲ್ಲಿ ಏಕತೆ ಸಾಧಿಸಿದ್ದೇವೆ. ಕಾರ್ಯಕರ್ತರು ಹಾಗೂ ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡುತ್ತೇವೆ. ಅವರ ಇಚ್ಛೆಯ ವಿರುದ್ಧವಾಗಿ ನಾವು ಎಂದೂ ನಡೆಯುವುದಿಲ್ಲ. ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ. ಶೀಘ್ರ ಅಭ್ಯರ್ಥಿಯ ಹೆಸರು ಘೋಷಣೆಯಾಗಲಿದ್ದು ಮುಂಬರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇವೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ಎಸ್‌.ಯೋಗೇಶ್‌ ಮಾತನಾಡಿ ‘ಅಭ್ಯರ್ಥಿಗಳ ಘೋಷಣೆಯಲ್ಲಿ ಯಾವುದೇ ಗೊಂದಲ ಇಲ್ಲ. ಸೂಕ್ತ ಸಮಯದಲ್ಲಿ ಮುಖಂಡರು ನಿರ್ಧಾರ ಕೈಗೊಳ್ಳಲಿದ್ದಾರೆ. ಕುಮಾರಸ್ವಾಮಿ ಅವರು ಕ್ಷೇತ್ರದ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ಶೀಘ್ರ ಅಭ್ಯರ್ಥಿಯ ಹೆಸರು ಘೋಷಣೆಯಾಗಲಿದೆ. ಕಳೆದ ನಾಲ್ಕೂವರೆ ವರ್ಷಗಳಿಂದ ಶಾಸಕ ಅಂಬರೀಷ್‌ ನಿರ್ಲಕ್ಷ್ಯ ಮಾಡಿದ್ದಾರೆ. ಜನರು ಯಾವುದೇ ಮೂಲ ಸೌಲಭ್ಯಗಳಿಲ್ಲದೆ ನರಳುತ್ತಿದ್ದರೂ ಶಾಸಕರು ಇತ್ತ ಮುಖ ಹಾಕಿಲ್ಲ’ ಎಂದು ಹೇಳಿದರು.

‘ಆಲಹಳ್ಳಿ ಬಡಾವಣೆಯ ಮನೆಗಳಿಗೆ ಮಳೆ ನೀರು ನುಗ್ಗಿ ಅಲ್ಲಿಯ ನಿವಾಸಿಗಳು ಅತಂತ್ರರಾಗಿದ್ದರು. ಆ ಸಂದರ್ಭದಲ್ಲಿ ನಮ್ಮ ನಾಯಕರಾದ ಎಚ್‌.ಡಿ.ಕುಮಾರಸ್ವಾಮಿ ಅವರು ಬಡಾವಣೆಗೆ ಭೇಟಿ ನೀಡಿ ಜನರಿಗೆ ಅಕ್ಕಿ, ಗೋಧಿ, ಚಾಪೆ, ಹಾಸಿಗೆ ಸೌಲಭ್ಯ ನೀಡಿದರು. ಕ್ಷೇತ್ರದ ಜನರ ಕಷ್ಟಗಳಿಗೆ ಜೆಡಿಎಸ್‌ ಸ್ಪಂದಿಸುತ್ತದೆ. ಮುಂದಿನ ಚುನಾವಣೆಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ಟಿಕೆಟ್‌ ಸಿಗಲಿದೆ. ಈ ಕುರಿತು ಯಾವುದೇ ಟಿಕೆಟ್‌ ಆಕಾಂಕ್ಷಿಗಳಲ್ಲಿ ಗೊಂದಲ ಇಲ್ಲ’ ಎಂದು ಹೇಳಿದರು. ಗೋಷ್ಠಿಯಲ್ಲಿ ಮುಖಂಡರಾದ ಎಂ.ಶ್ರೀನಿವಾಸ್‌, ಡಾ.ಕೃಷ್ಣ, ಎನ್‌.ಶಿವಣ್ಣ, ಸಿದ್ದರಾಮೇಗೌಡ, ಪ್ರಭಾವತಿ ಜಯರಾಂ ಹಾಜರಿದ್ದರು.

ಬಿಜೆಪಿ ಸಂಪರ್ಕ ಇಲ್ಲ
‘ಜೆಡಿಎಸ್‌ನಿಂದ ಟಿಕೆಟ್‌ ಸಿಗದಿದ್ದರೆ ನಾನು ಬಿಜೆಪಿಯಿಂದ ಸ್ಪರ್ಧಿಸುತ್ತೇನೆ ಎಂಬುದು ಶುದ್ಧ ಸುಳ್ಳು. ಸಿ.ಪಿ.ಯೋಗೇಶ್ವರ್‌ ನನ್ನನ್ನು ಸಂಪರ್ಕಿಸಿಲ್ಲ. ನಾನು ಅವರ ಮುಖವನ್ನೇ ನೋಡಿಲ್ಲ’ ಎಂದು ಎಂ.ಶ್ರೀನಿವಾಸ್‌ ಹೇಳಿದರು.

‘ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದಿದ್ದೇನೆ. ಪಕ್ಷದಿಂದ ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದೇನೆ. ಟಿಕೆಟ್‌ ಸಿಕ್ಕರೆ ಈ ಬಾರಿ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ’ ಎಂದರು.

‘ಕುಮಾರ ಪರ್ವ’ ಉದ್ಘಾಟನೆ 13ರಂದು
‘ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು 20 ತಿಂಗಳು ಮುಖ್ಯಮಂತ್ರಿಯಾಗಿ ನೀಡಿದ ಕೊಡುಗೆಗಳನ್ನು ಜನರಿಗೆ ತಲುಪಿಸುವ ಕುಮಾರಪರ್ವ– ಮನೆಮನೆಗೆ ಕುಮಾರಣ್ಣ ಅಭಿಯಾನ ಜ.13ರಂದು ಬಸರಾಳು ಗ್ರಾಮದಲ್ಲಿ ಉದ್ಘಾಟನೆಗೊಳ್ಳಲಿದೆ’ ಎಂದು ಮಾಜಿ ಶಾಸಕ ಎಂ.ಶ್ರೀನಿವಾಸ ಹೇಳಿದರು.

‘ಉದ್ಘಾಟನಾ ಕಾರ್ಯಕ್ರಮ ಗ್ರಾಮದ ಕಾಲಭೈರವೇಶ್ವರ ಕಲ್ಯಾಣ ಮಂಟಪದ ಮುಂಭಾಗ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಸಂಸದ ಸಿ.ಎಸ್‌.ಪುಟ್ಟರಾಜು ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ, ಮಾಜಿ ಸಂಸದ ಎಚ್‌.ವಿಶ್ವನಾಥ್‌, ಮುಖಂಡರಾದ ಡಾ.ರಮೇಶ್‌, ಜಫ್ರುಲ್ಲಾ ಖಾನ್‌ ಮುಂತಾದವರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.