ADVERTISEMENT

ಅಧಿಕಾರ ಶಾಶ್ವತವಲ್ಲ; ಸನ್ಮಾರ್ಗ ಅಗತ್ಯ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 8:15 IST
Last Updated 19 ಸೆಪ್ಟೆಂಬರ್ 2011, 8:15 IST

ಅಮೀನಗಡ: ಸಂಪತ್ತು ಅಧಿಕಾರ ಶಾಶ್ವತವಲ್ಲ, ಸನ್ಮಾರ್ಗ ಆಗತ್ಯ ಎಂದು  ಸಂಸದ ಪಿ.ಸಿ ಗದ್ದಿಗೌಡರ ಅಭಿಪ್ರಾಯಪಟ್ಟರು. ಪಟ್ಟಣದ ಪ್ರಭುಶಂಕರೇಶ್ವರ ಗಚ್ಚಿನಮಠದ ಲಿಂಗೈಕ್ಯ ಪ್ರಭುರಾಜೇಂದ್ರಶ್ರಿಗಳ 97ನೇ ಜಯಂತ್ಯುತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ವಚನ-ಪ್ರವಚನ ಮುಕ್ತಾಯ ಮತ್ತು ಪಲ್ಲಕ್ಕಿ ಉತ್ಸವದಲ್ಲಿ  ಮಾತನಾಡಿದ ಅವರು, ಪುರಾಣ-ಪುಣ್ಯಕಥೆಗಳು ಆಲಿಸುವುದರಿಂದ, ಪ್ರಾಮಾಣಿಕತೆ, ಸಹ ಜೀವನ ಗುಣ ಬೆಳೆಯುತ್ತದೆ ಎಂದರು.

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ,  ಪ್ರಭುರಾಜೇಂದ್ರ ಶ್ರೀ ಅವರ ಮಾರ್ಗದರ್ಶನ ಸ್ಮರಣೀಯ, ಅವರ ಆದರ್ಶವನ್ನು ಅನುಸರಿಸಬೇಕು, ಇಂತಹ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು ಇಂದಿನ ದಿನಮಾನಗಳಲ್ಲಿ ಅತ್ಯವಶ್ಯಕ ಎಂದರು.

ಜಿ.ಪಂ. ಅಧ್ಯಕ್ಷೆ ಕವಿತಾ ದಡ್ಡೇನವರ ಮಾತನಾಡಿ, ದೃಶ್ಯ ಮಾಧ್ಯಮಗಳಿಂದ ಕಲುಷಿತಗೊಂಡಿರುವ ಇಂತಹ ವಾತಾವರಣದಲ್ಲಿ ನಿಷ್ಕಲ್ಮಶ ಜೀವನಕ್ಕೆ ಪುರಾಣ-ಪುಣ್ಯಕಥೆಗಳು ಸನ್ಮಾರ್ಗ ತೋರುತ್ತವೆ ಎಂದರು.

ಸಾನಿಧ್ಯ ವಹಿಸಿದ್ದ ಕಮತಗಿ ಹುಚ್ಚೇಶ್ವರ ಶ್ರಿ ಮಾತನಾಡಿ,  ಪ್ರಭುರಾಜೇಂದ್ರಶ್ರಿ ಅವರು ಪ್ರಾಣಿ ಪಕ್ಷಿ ಪ್ರಿಯರಾಗಿದ್ದರಲ್ಲದೆ, ಮಮತೆಯ ಸಾಕಾರಮೂರ್ತಿಗಳಾಗಿದ್ದರು ಎಂದರು.

ಶಂಕರರಾಜೇಂದ್ರಶ್ರಿ, ಅಡವೀಶ್ವರ ದೇವರು,  ಒಳಬಳ್ಳಾರಿ ಸುವರ್ಣಗಿರಿಯ ಸಿದ್ಧಲಿಂಗ ಸ್ವಾಮೀಜಿ, ಮುನವಳ್ಳಿ ಸೋಮಶೇಖರಮಠದ ಮುರುಗೇಂದ್ರ ಸ್ವಾಮೀಜಿ, ಉಪ್ಪಿನ ಬೆಟಗೇರಿ ಕುಮಾರ ವಿರೂಪಾಕ್ಷ ಸ್ವಾಮೀಜಿ ಆಶೀರ್ವಚವ ನೀಡಿದರು.

ಶಿವಯೋಗ ಮಂದಿರದ ಅಧ್ಯಕ್ಷರಾದ ಹಾಲಕೇರಿ ಸಂಸ್ಥಾನ ಮಠದ  ಅಭಿನವ ಅನ್ನದಾನ ಸ್ವಾಮೀಜಿ ಮಾತನಾಡಿ, ಪ್ರಭುರಾಜೇಂದ್ರ ಸ್ವಾಮೀಜಿ ತಮ್ಮ ಸಂಗೀತ ಪ್ರವಚನಗಳಿಂದಲೇ ಖ್ಯಾತರಾದವರು. ಅವರ ನಿಸರ್ಗ ಪ್ರೇಮ, ನಿರ್ಲಿಪ್ತತೆ, ಉದಾರತೆ, ಆದರ್ಶಗಳು ನಮಗೆ ದಾರಿದೀಪ. ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಬಾಗಲಕೋಟೆ ನಗರಸಭೆ ಉಪಾಧ್ಯಕ್ಷ ಶರಣಪ್ಪ ಗುಳೇದ, ಮಲ್ಲಪ್ಪ ಬೆಂಡಿಗೇರಿ, ಎಪಿಎಂಸಿ ಸದಸ್ಯ ಸಂಗಣ್ಣ ಕಲಾದಗಿ, ಬ್ಯಾಂಕ್ ಅಧ್ಯಕ್ಷ ಬಸವರಾಜ ಗದ್ದಿ, ನಿದೇಶಕ ಬಿ.ವಿ.ಪಾಟೀಲ, ಮಲ್ಲಪ್ಪ ಬೆಂಡಿಗೇರಿ ಮುಂತಾದವರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ನಾಗೂರ, ಕಲ್ಲಗೋನಾಳ, ಚಿತ್ತರಗಿ, ರಕ್ಕಸಗಿ, ಹುಲಗಿನಾಳ, ಸುಳೇಭಾವಿ, ಹಿರೇಬಾದವಾಡಗಿ, ಚಿತ್ತವಾಡಗಿ ಮುಂತಾದ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಬಂದ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.