ADVERTISEMENT

ಅಹಿಂಸೆ ವ್ರತವಾಗಲಿ:ಗೋವಿಂದರಾವ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 8:10 IST
Last Updated 20 ಫೆಬ್ರುವರಿ 2012, 8:10 IST

ಬೀಳಗಿ: ದಲಿತರ ಸಿಟ್ಟು, ಆಕ್ರೋಶ, ಅವಮಾನಗಳನ್ನು ಬಂಡವಾಳವನ್ನಾಗಿಸಿಕೊಂಡು ಅವರನ್ನು ಹಿಂಸೆಯತ್ತ ಪ್ರಚೋದಿಸುವಂತಹ ಹುನ್ನಾರ ವಿದೇಶಿ ಶಕ್ತಿಗಳಿಂದ ನಡೆಯುತ್ತಿದೆ. ಅವುಗಳಿಂದ ದಲಿತರು ಜಾಗರೂಕರಾಗಿರ ಬೇಕಲ್ಲದೇ ಅಹಿಂಸೆಯನ್ನು ಒಂದು ವ್ರತವನ್ನಾಗಿ ಸ್ವೀಕರಿಸ ಬೇಕೆಂದು ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದರಾವ್ ದಲಿತ ಸಮುದಾಯಕ್ಕೆ ಸಲಹೆ ಮಾಡಿದರು.

ತಾಲ್ಲೂಕಿನ ಚಿಕ್ಕಸಂಗಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರದಲ್ಲಿ ರವಿವಾರ ಸಮಾರೋಪ ಭಾಷಣ ಮಾಡಿ ಮಾತನಾಡಿದರು.

ದಲಿತರಿಗೆ ಭಗವದ್ಗೀತೆಯನ್ನು ಬೋಧಿಸುವದು ಬೇಡ. ನಿಮಗೂ ಕೆಳವರ್ಗಗಳ ಬೆವರು ಹಾಗೂ ಶ್ರಮದ ಅರಿವಾ ಗಬೇಕೆಂದಿದ್ದಲ್ಲಿ ಮಂಟೇಸ್ವಾಮಿಯಂತಹವರ ಸಾಹಿತ್ಯದ ಅಧ್ಯಯನ ನಿಮ್ಮ ಮಠದಲ್ಲಿಯೇ ನಡೆಸಿರಿ ಎಂದು ಮಠಗ ಳನ್ನು ತರಾಟೆಗೆ ತೆಗೆದುಕೊಂಡ ಅವರು, ಚೌಕಿ ಊಟದಂತಹ ಸಂದರ್ಭಗಳಲ್ಲಿ ಶಕೇಶಿನಿಯರಿಗೆ ಭೋಜನಕ್ಕೆ ಅವಕಾಶ ನೀಡದೇ ಅಸಮಾನತೆ ತೋರುವವರಿಗೆ ಸಮಾನತೆಯ ಬಗ್ಗೆ ಮಾತನಾಡುವ ಹಕ್ಕೆಲ್ಲಿದೆ ಎಂದು ಪ್ರಶ್ನಿಸಿದರು.

ನಮಗೆ ಸ್ವಾತಂತ್ರ್ಯ ಬಂದಿದೆ. ಆದರೆ ಸಮಾನತೆ ಬಂದಿಲ್ಲ. ಸ್ವಾತಂತ್ರ್ಯ ಪೂರ್ವದ ಪಳೆಯುಳಿಕೆಗಳಾದ ಪಾಳೇಗಾರರು, ಧಣಿಗಳು, ದುಡ್ಡಿದ್ದವರು ನಮ್ಮನ್ನು ಆಳುತ್ತಿದ್ದಾರೆ. ಧರ್ಮವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡವರು ಎಂಜಲೆಲೆಯ ಮೇಲೆ ಉರುಳುವದನ್ನು, ಗಂಡ ಸತ್ತ ಮಹಿಳೆಯ ತಲೆ ಬೋಳಿಸುವದನ್ನು ಖಂಡಿಸಲು ಇಂದಿಗೂ ಸಿದ್ಧರಿಲ್ಲ. ಆ ಕಾರಣಕ್ಕಾಗಿಯೇ ಅಂಬೇಡ್ಕರ್ ಮನುಶಾಸ್ತ್ರವನ್ನು ಸುಟ್ಟು ಹಾಕಿದರೇ ಹೊರತು ಯಾರನ್ನಾದರೂ ಕೆರಳಿಸಲಾಗಲೀ, ಅಪಮಾನಿಸಲಿಕ್ಕಾಗಲೀ ಅಲ್ಲ. ವ್ಯವಸ್ಥೆಯನ್ನು ಸರಿಪಡಿಸು ವದೇ ಅವರ ಸಿಟ್ಟಿನ ಹಿಂದಿನ ಉದ್ದೇಶವಾಗಿತ್ತೆಂದರು.

ಶೇ.95ರಷ್ಟು ಮಠಾಧೀಶರು ಭ್ರಷ್ಟರಾಗಿದ್ದಾರೆ. ತಮ್ಮ ಮಠ ಹಾಗೂ ಮಠದ ಸಂಪತ್ತನ್ನು ಭದ್ರಪಡಿಸಿಕೊಳ್ಳುವ ದರತ್ತ ಗಮನ ಹರಿಸುತ್ತಿದ್ದಾರೆಯೇ ಹೊರತು ಅವರ ಕಾಳಜಿ ಜನಪರವಾದುದಲ್ಲ ಎಂದರು.

ಗಾಂಧಿ, ಅಂಬೇಡ್ಕರ್,ಟ್ಯಾಗೋರ್ ಈ ಮೂವರು ಮಹಾನುಭಾವರ ಅಧ್ಯಯನಕ್ಕೆ ನಿಂತರೆ ಒಬ್ಬರೊಳಗೊಬ್ಬರು ಸಮ್ಮಿಳಿತಗೊಳ್ಳುತ್ತಾರೆ. ಮೂವರೂ ನಮಗೆ ಆದರ್ಶ ಪ್ರಾಯರಾಗಿ ಕಾಣಿಸುತ್ತಾರೆ ಎಂದರು.

ರಾಜ್ಯ ಸಂಚಾಲಕ ಲಕ್ಷ್ಮೆನಾರಾಯಣ ನಾಗವಾರ ಅಧ್ಯಕ್ಷತೆವಹಿಸಿದ್ದ ವೇದಿಕೆಯ ಮೇಲೆ ಅಯ್ಯಪ್ಪ ಅರೋಲಿ, ಶೋಭಾ ಕಟ್ಟಿಮನಿ, ಶಾಮ ಘಾಟಗೆ, ಬಸವರಾಜ ಮುಧೋಳ, ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ, ಮಾಜಿ ಶಾಸಕರುಗಳಾ ಜೆ.ಟಿ.ಪಾಟೀಲ, ಬಿ.ಜಿ.ಜಮಖಂಡಿ, ಚಿಕ್ಕ ಸಂಗಮದ ಪ್ರಭು ಸ್ವಾಮೀಜಿ, ಸುಶೀಲ ಕುಮಾರ ಬೆಳಗಲಿ, ಪತ್ರಕರ್ತ ಸನತ್‌ಕುಮಾರ ಬೆಳಗಲಿ, ಅಲಿಬಾಬಾ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಮಹಾದೇವ ಹಾದಿಮನಿ ಸ್ವಾಗತಿಸಿದರು. ಹನುಮಂತ ಚಿಮ್ಮಲಗಿ ವಂದಿಸಿದರು. ಪ್ರೇಮಾ ವಸಂತ ಕೊಡಗು ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.