ADVERTISEMENT

ಇನ್ನೂ 1200 ಕಲಾವಿದರಿಗೆ ಮಾಸಾಶನ ಶೀಘ್ರ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 7:45 IST
Last Updated 15 ಅಕ್ಟೋಬರ್ 2012, 7:45 IST
ಇನ್ನೂ 1200 ಕಲಾವಿದರಿಗೆ ಮಾಸಾಶನ ಶೀಘ್ರ
ಇನ್ನೂ 1200 ಕಲಾವಿದರಿಗೆ ಮಾಸಾಶನ ಶೀಘ್ರ   

ಬಾಗಲಕೋಟೆ: ಶೀಘ್ರದಲ್ಲೇ 1200 ಕಲಾವಿದರಿಗೆ ಹೊಸದಾಗಿ ಮಾಸಾಶನ ನೀಡಲು ಪಟ್ಟಿ ಅಂತಿಮಗೊಳಿಸಲಾಗಿದೆ ಎಂದ ಅವರು, ಅರ್ಹತೆ ಮತ್ತು ವಯೋಮಿತಿಯನ್ನು ಆಧಾರಿಸಿ ಮಾಸಾಶನ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಎಂ.ಕಾರಜೋಳ ಭರವಸೆ ನೀಡಿದರು.

ನವನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ನಡೆದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಜಾನಪದ ಕಲಾಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಲಾವಿದರಿಗೆ ಪ್ರಸ್ತುತ ನೀಡಲಾಗುತ್ತಿರುವ ಮಾಸಾಶನವನ್ನು ಮುಂದಿನ ವರ್ಷದಿಂದ ಒಂದು ಸಾವಿರದಿಂದ ಎರಡು ಸಾವಿರ ರೂಪಾಯಿಗೆ ಹೆಚ್ಚಿಸುವ ಉದ್ದೇಶವಿದೆ ಎಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಇರುವ 12 ವಿವಿಧ ಅಕಾಡೆಮಿಗಳಿಗೆ ಬಜೆಟ್‌ನಲ್ಲಿ ತಲಾ ರೂ 50 ಲಕ್ಷ ಅನುದಾನ ನೀಡಲಾಗಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಇತಿಹಾಸವನ್ನು ದಾಖಲಿಸುವ ಕಾರ್ಯಕ್ಕೆ ಯೋಜಿಸಿದ್ದು, ಹಂಪಿ ವಿಶ್ವವಿದ್ಯಾಲಯಕ್ಕೆ ಜವಾಬ್ದಾರಿ ವಹಿಸಲಾಗುವದು. ದೃಶ್ಯ ಮಾಧ್ಯಮಗಳಿಗೆ ಹೊಂದಿಕೊಳ್ಳುವಂತೆ ಜಾನಪದ ಕಲಾ ಪ್ರಕಾರಗಳ ಪ್ರದರ್ಶನ ಶೈಲಿ ಬದಲಾಯಿಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಜಾನಪದ ಕಲಾವಿದರು ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ನಿಜವಾದ ವಾರಸುದಾರರು. ಇತ್ತೀಚಿನ ದಿನಗಳಲ್ಲಿ ಜಾನಪದ ಕಲಾವಿದರ ಸಂಖ್ಯೆ ಕ್ಷೀಣಿಸುತ್ತಿದೆ. ಯುವ ಜನತೆ ಜಾನಪದ ಕಲೆ ಉಳಿಸಿ, ಬೆಳೆಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.