ADVERTISEMENT

ಓದುಗರ ನೆಮ್ಮದಿ ಕೆಡಿಸಿರುವ ಆಧಾರ್

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 9:10 IST
Last Updated 2 ಜನವರಿ 2012, 9:10 IST

ಮುಧೋಳ: ಇಲ್ಲಿನ ರನ್ನ ಸ್ಮಾರಕ ಗ್ರಂಥಾಲಯದಲ್ಲಿ ಆಧಾರ ಕೇಂದ್ರಕ್ಕೆ ಜಾಗ ಕೊಟ್ಟಿದ್ದು, ಗ್ರಂಥಾಲಯದ ಬೆಲೆ ಬಾಳುವ ಬಾಗಿಲು, ಕಿಟಕಿಗಳು ಕಿತ್ತುಹಾಕ ಲಾಗಿದೆ. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ, ಕಸ, ಕಡ್ಡಿ ಬಿದ್ದು ಓದುಗರ ನೆಮ್ಮದಿ ಕೆಡಿಸುತ್ತಿದ್ದರೆ, ಇನ್ನೊಂದೆಡೆ 4 ತಿಂಗಳಿಂದ ಕರೆಂಟ್ ಬಿಲ್ ತುಂಬದೆ ಗ್ರಂಥಾಲಯ ದಲ್ಲಿ ಕತ್ತಲೆ ಆವರಿಸುವಂತೆ ಮಾಡಲಾಗಿದೆ. 

ಇಲ್ಲಿನ ರನ್ನ ಸ್ಮಾರಕ ಗ್ರಂಥಾಲಯ ಹಾಗೂ ಸಂಶೋ ಧನಾ ಕೇಂದ್ರದ ಕೆಳಗಿನ ಕಟ್ಟಡವನ್ನು ಆಧಾರ ಕೇಂದ್ರಕ್ಕೆ ಕೊಡಲಾಗಿದ್ದು, ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಬಂದವರ ನೂಕು ನುಗ್ಗಲಿನಿಂದ ಕಟ್ಟಡದ ಅಂದ ಹೆಚ್ಚಿಸಿದ್ದ ಮುಖ್ಯದ್ವಾರದ ದೊಡ್ಡ ಗಾಜು ಒಡೆದು ಹೋಗಿದೆ.

ಗ್ರಂಥಾಲಯದ ಸುತ್ತಲು ಎಲ್ಲೆಂದರಲ್ಲಿ ಗಲೀಜು ಮಾಡಲಾಗುತ್ತಿದೆ. ಗ್ರಂಥಾಲಯದ ಹಿಂಬದಿ ಯಲ್ಲಿ ಒಂದೆಡೆ ಕಸದ ರಾಶಿಯೇ ಬಿದ್ದರೆ, ಇನ್ನೊಂದೆಡೆ ಮೂತ್ರ ವಿಸರ್ಜನೆ ಮಾಡಲಾಗುತ್ತಿದೆ. ಇದರಿಂದ ಸುತ್ತಲಿನ ಪರಿಸರ ಹಾಳಾಗುತ್ತಿದ್ದು, ಓದುಗರಿಗೆ ತೀವ್ರ ತೊಂದರೆ ಹಾಗೂ ಕಿರಿಕಿರಿಯಾಗುತ್ತಿದೆ ಎಂದು ನೊಂದ ಹಲವು ಓದುಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ, ಆಧಾರ್ ಕೇಂದ್ರದ ಸಮಾರಂಭ ನಡೆಯುವ ಹಾಲ್‌ನಲ್ಲಿ ಹೊರಗಿನ ವರಾಂಡಾದಲ್ಲಿ ಕಸ ಗುಡಿಸದೆ, ಹೊಲಸು ಎದ್ದು ಕಾಣುತ್ತದೆ.

ಇದು ಒಂದು ರೀತಿಯ ಸಮಸ್ಯೆಯಾದರೆ, ಆಧಾರ ಕೇಂದ್ರ ಪ್ರಾರಂಭವಾಗುವ ಮುಂಚೆ ಗ್ರಂಥಾಲಯದ ಕರೆಂಟ್ ಬಿಲ್ಲು ರೂ 500ರಿಂದ 600ರ ವರೆಗೆ ಬರುತ್ತಿತ್ತು, ಆಧಾರ್ ಕೇಂದ್ರ ಪ್ರಾರಂಭವಾದಾಗಿನಿಂದ ರೂ 2000ದ ವರೆಗೆ ಬಿಲ್ ಬರುತ್ತಿದ್ದು, ತಮ್ಮ ಪಾಲಿನ ಬಿಲ್ಲನ್ನು ಆಧಾರ ಕೇಂದ್ರದವರು ತುಂಬದಿ ರುವುದಕ್ಕೆ ಗ್ರಂಥಾಲಯದ ಕರೆಂಟ್‌ನ್ನು ಕಟ್ ಮಾಡಲು ಇಲಾಖೆ ಮುಂದಾಗಿದೆ.

ಕೋಟಿ ಗಟ್ಟಲೆ ಖರ್ಚು ಮಾಡಿ ಕಟ್ಟಿರುವ ಸಂಶೋ ಧನಾ ಕೇಂದ್ರ ಮತ್ತು ಗ್ರಂಥಾಲಯ ಜಿಲ್ಲೆಯಲ್ಲಿಯೇ ಮಾದರಿ ಎನಿಸಿಕೊಂಡಿದೆ.

ಬೇರೆ ಕಡೆಯಿಂದ ನಗರಕ್ಕೆ ಆಗಮಿಸುವ ಸಾಹಿತಿ ಗಳು, ಸಂಶೋಧಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು, ಕನ್ನಡ ಸಾಹಿತ್ಯ ಪರಿಷತ್ತಿನವರು, ಸಾಹಿತ್ಯಾಸಕ್ತರು ಯಾರೇ ಬಂದರು ರನ್ನ ಸಂಶೋಧನಾ  ಕೇಂದ್ರಕ್ಕೆ ಭೇಟಿಕೊಟ್ಟು ಹೋಗುತ್ತಾರೆ.

ಈವರೆಗೆ ಬಂದವರೆಲ್ಲ ಕವಿಚಕ್ರವರ್ತಿಯ ಹೆಸರಿನಲ್ಲಿ ನಿರ್ಮಾಣ ಗೊಂಡ ಈ ಗ್ರಂಥಾಲಯ ಹಾಗೂ ಸಂಶೋಧನಾ ಕೇಂದ್ರವನ್ನು ನಿರ್ಮಿಸಿದ್ದನ್ನು ಹೊಗಳಿ ಹೋಗಿದ್ದಾರೆ.

ಗ್ರಂಥಾಲಯಕ್ಕೆ ಬರುವ ಓದುಗರ ನೆಮ್ಮದಿಯನ್ನು ಹಾಳು ಮಾಡುವದಲ್ಲದೆ. ಸುತ್ತಲಿನ ಪರಿಸರವನ್ನೂ ಕೆಡಿಸುವದರಿಂದ ತಕ್ಷಣವೇ ಆಧಾರ ಕಾರ್ಡ ಮಾಡಿಕೊಡುವ ಕೇಂದ್ರವನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಗೊಳಿಸಬೇಕು, ಸಾರ್ವಜನಿಕರು ಕೂಡಾ ಕಟ್ಟಡದಲ್ಲಿ ಹಾಗೂ ಸುತ್ತಲು ಗಲೀಜು ಮಾಡದೆ ಸಿಸ್ತನ್ನು ಕಾಯ್ದುಕೊಳ್ಳಬೇಕು, ನಿತ್ಯ ಸ್ವಚ್ಛಗೊಳಿಸಿ, ಸುವ್ಯವಸ್ಥಿತವಾಗಿಡಲು ಯಾವದಾದರು ಇಲಾಖೆಗೆ ಅದನ್ನು ಒಪ್ಪಿಸಬೇಕು ಎಂಬುದು ಸಾರ್ವಜನಿಕರ ಹಾಗೂ ಓದುಗರ ಬೇಡಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.