ADVERTISEMENT

‘ಕಲಿಕಾ ವಿಷಯದಲ್ಲಿ ರಾಜಿ ಬೇಡ’

ಪ್ರ–ಶಿಕ್ಷಣಾರ್ಥಿಗಳ ಸಂಸತ್‌ ಉದ್ಘಾಟನೆ ಸಮಾರಂಭದಲ್ಲಿ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 5:59 IST
Last Updated 25 ಮೇ 2018, 5:59 IST

ಜಮಖಂಡಿ: ’ಪ್ರತಿ ವಿದ್ಯಾರ್ಥಿಯೂ ನಾಯಕ–ನಾಯಕಿಯಂತೆ ವರ್ತಿಸಬೇಕೆ ವಿನಃ ಇನ್ನೊಬ್ಬರ ಅನುಯಾಯಿಗಳಾಗಬಾರದು. ವಿಶೇಷ ಸಾಧನೆ ಮಾಡಬೇಕೆಂಬ ಛಲದಿಂದ ಮುನ್ನಡೆಯಬೇಕು. ಬೋಧನೆ ಮತ್ತು ಕಲಿಕೆ ವಿಷಯದಲ್ಲಿ ಮಹಾವಿದ್ಯಾಲಯ ಎಂದೂ ರಾಜಿ ಮಾಡಿಕೊಳ್ಳಬಾರದು’ ಎಂದು ಇಗ್ನೊ ಮುಕ್ತ ವಿಶ್ವವಿದ್ಯಾಲಯದ ವಿಜಯಪುರ ಕೇಂದ್ರದ ಪ್ರಾದೇಶಿಕ ನಿರ್ದೇಶಕಿ ಡಾ.ಎಸ್‌. ರಾಧಾ ಹೇಳಿದರು.

ಬಿಎಲ್‌ಡಿಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರ–ಶಿಕ್ಷಣಾರ್ಥಿಗಳ ಸಂಸತ್‌ ಉದ್ಘಾಟಿಸಿ ಪ್ರ–ಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಮಹಾವಿದ್ಯಾಲಯದಲ್ಲಿ ಹೊಸತನ ಎಂಬ ಸಂಸ್ಥೆಯನ್ನು ಹುಟ್ಟು ಹಾಕಬೇಕು. ಸಂಸ್ಥೆಯ ಅಡಿಯಲ್ಲಿ ಹೊಸ ಕಲ್ಪನೆ ಮತ್ತು ಹೊಸ ವಿಚಾರಗಳ ಕುರಿತು ನಿರಂತರವಾಗಿ ಚರ್ಚೆ ನಡೆಯಬೇಕು. ಯಾರೊಬ್ಬರೂ ಯೋಚಿಸದ ರೀತಿಯಲ್ಲಿ ಯೋಚನಾ ಲಹರಿ ಹರಿದು ಬರುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಬಿಎಲ್‌ಡಿಇ ಸಂಸ್ಥೆ ಆಡಳಿತಾಧಿಕಾರಿ ಪ್ರೊ.ಎಸ್‌.ಎಚ್‌.ಲಗಳಿ ಮಾತನಾಡಿ, ‘ಮುಂಬರುವ
ದಿನಗಳಲ್ಲಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಾಲ್ಕು ವರ್ಷದ ಇಂಟಿಗ್ರೇಟೆಡ್‌ ಬಿ.ಎ.,ಬಿ.ಇಡಿ, ಬಿ.ಎಸ್‌ಸಿ, ಬಿ.ಇಡಿ ಕೋರ್ಸ್‌ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ದ್ವಿತೀಯ ಪಿಯುಸಿ ನಂತರ ವಿದ್ಯಾರ್ಥಿಗಳು ನೇರವಾಗಿ ಆ ಕೋರ್ಸ್‌ಗೆ ಪ್ರವೇಶ ಪಡೆಯಲು ಅವಕಾಶ ದೊರೆಯುತ್ತದೆ’ ಎಂದು ಹೇಳಿದರು.

ಬಿಎಲ್‌ಡಿಇ ಸಂಸ್ಥೆಯ ಪದವಿ ಪೂರ್ವ ಕಾಲೇಜುಗಳ ಆಡಳಿತಾಧಿಕಾರಿ ಬಿ.ಆರ್. ಪಾಟೀಲ, ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಸ್‌.ಸಿ. ಹಿರೇಮಠ ಮಾತನಾಡಿದರು. ಬಿಎಲ್‌ಡಿಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯಗಳ ಆಡಳಿತಾಧಿಕಾರಿ ಡಾ.ಎ.ಎಂ. ಅಜಾತಸ್ವಾಮಿ ಸ್ವಾಗತಿಸಿದರು. ಮಹಾಲಕ್ಷ್ಮಿ ಮಾಳೇದ ನಿರೂಪಿಸಿದರು. ವಿದ್ಯಾಶ್ರೀ ಮರನೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.