ADVERTISEMENT

ಕೆ-ಶಿಪ್‌ ರಸ್ತೆ ಕಾಮಗಾರಿ ಕುಂಠಿತ: ಸಂಚಾರ ಸ್ಥಗಿತ

16 ಮೀಟರ್‌ಗೆ ವಿಸ್ತರಿಸಲು ನಿಸರ್ಗ ಬಳಗ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 4:48 IST
Last Updated 20 ಏಪ್ರಿಲ್ 2018, 4:48 IST
ಬಾದಾಮಿ –ಗದಗ ಮುಖ್ಯರಸ್ತೆಯ ನಗರದ ಹೊರಪೇಟೆ ಓಣಿಯ ಹಳೇ ಗರಡಿಮನೆ ಹತ್ತಿರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿರುವುದು
ಬಾದಾಮಿ –ಗದಗ ಮುಖ್ಯರಸ್ತೆಯ ನಗರದ ಹೊರಪೇಟೆ ಓಣಿಯ ಹಳೇ ಗರಡಿಮನೆ ಹತ್ತಿರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿರುವುದು   

ಬಾದಾಮಿ: ಕೆಶಿಪ್ ರಸ್ತೆ ವಿಸ್ತರಣೆ ಯೋಜನೆಯಡಿ ಪಟ್ಟಣದ ಹೊರಪೇಟೆ ಓಣಿಯಲ್ಲಿ ಚರಂಡಿ ಕಾಮಗಾರಿಗಾಗಿ ಗುಂಡಿಯನ್ನು ಅಗೆದು 15 ದಿನಗಳಾದರೂ ಕಾಮಗಾರಿ ಆರಂಭವಾಗಿಲ್ಲ. ಇದರಿಂದ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ ನಿತ್ಯವೂ ದುಸ್ತರವಾಗಿದೆ.

ಕೆಶಿಪ್‌ ಕಾಮಗಾರಿಯಲ್ಲಿ ರಸ್ತೆಯನ್ನು 16 ಮೀಟರ್‌ ವಿಸ್ತರಿಸಬೇಕಿದೆ. ಆದರೆ 14 ಮೀಟರ್‌ ವಿಸ್ತರಣೆ ನಡೆಯುತ್ತಿದ್ದು, ಅದನ್ನು 16 ಮೀಟರ್‌ಗೆ ವಿಸ್ತರಿಸಬೇಕು ಎಂದು ಸ್ಥಳೀಯ ನಿಸರ್ಗ ಬಳಗ ಒತ್ತಾಯಿಸಿದ್ದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.

ಅಂಚೆ ಇಲಾಖೆಯಿಂದ ವೀರಪುಲಿಕೇಶಿ ವೃತ್ತದ ವರೆಗೆ ಅಂದಾಜು 200 ಮೀಟರ್‌ ಕಾಮಗಾರಿ ಸ್ಥಗಿತಗೊಂಡು ಅನೇಕ ತಿಂಗಳು ಗತಿಸಿವೆ. ಈಗ ಬಾದಾಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎಂಬ ಕಾರಣಕ್ಕೆ ರಸ್ತೆ ವಿಸ್ತೀರ್ಣ ಕಾಮಗಾರಿಯನ್ನು ಪುನಃ ಆರಂಭಿಸಲಾಗಿದ್ದರೂ ಹೊರಪೇಟಿ ಓಣಿಯ ಸಮೀಪದ ಗರಡಿಮನೆ ಹತ್ತಿರ ಕಾಮಗಾರಿ ಸ್ಥಗಿತವಾಗಿದೆ.

ADVERTISEMENT

‘ರಸ್ತೆ ವಿಸ್ತರಣೆಗಾಗಿ ಕಟ್ಟಡಗಳನ್ನ ತೆರವುಗೊಳಿಸಲು ಕೆಶಿಪ್‌ ಪರಿಹಾರ ಹಣ ಕೊಟ್ಟಿಲ್ಲ. ಆದ್ದರಿಂದ ಕಟ್ಟಡವನ್ನು ತೆಗೆಯುವುದಿಲ್ಲ ಎಂದು ಕಟ್ಟಡದ ಮಾಲೀಕರು ಹೇಳುತ್ತಾರೆ. ಪರಿಹಾರ ಧನವನ್ನು ಕೆಶಿಪ್‌ ಅಧಿಕಾರಿಗಳು ಮಂಜೂರು ಮಾಡಿ, ರಸ್ತೆಯನ್ನು 16 ಮೀಟರ್‌ ವಿಸ್ತರಿಸಬೇಕು’ ಎಂದು ನಿಸರ್ಗ ಬಳಗವು ಒತ್ತಾಯಿಸಿದೆ.

ಇಲ್ಲಿನ ರಸ್ತೆ ವಿಸ್ತೀರ್ಣತೆಯ ಕಾಮಗಾರಿ ಬಗ್ಗೆ ಹೋರಾಟ ಸಮಿತಿಯು ಈ ಮೊದಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನಿಸರ್ಗ ಬಳಗದ ಅಧ್ಯಕ್ಷ ಎಸ್‌.ಎಚ್‌. ವಾಸನ್‌ ಮತ್ತು ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್‌. ಹಿರೇಹಾಳ ತಿಳಿಸಿದರು.

‘ಹೊರಪೇಟೆ ಓಣಿಯಲ್ಲಿ 16 ಮೀಟರ್‌ ರಸ್ತೆ ವಿಸ್ತೀರ್ಣ ಕಾಮಗಾರಿ ಮಾಡಲಾಗುವುದು. 2 ಕಟ್ಟಡಗಳಿಗೆ ಪರಿಹಾರ ಧನ ಮಂಜೂರಾತಿಗೆ ಪ್ರಸ್ತಾವ ಕಳುಹಿಸಲಾಗಿದೆ. ಕಟ್ಟಡಗಳನ್ನು ತೆರವುಗೊಳಿಸಲಾಗುವುದು’ ಎಂದು ಬೆಳಗಾವಿಯ ಕೆಶಿಪ್‌ ಎಂಜಿನಿಯರ್ ಎಸ್‌.ಸಿ. ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

**

ಕೆಶಿಪ್‌ ಅಧಿಕಾರಿಗಳು ಶೀಘ್ರವಾಗಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆ ಹರಿಸಿ 16 ಮೀಟರ್ ರಸ್ತೆಯಾಗುವಂತೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು – ಎಸ್‌.ಎಚ್‌. ವಾಸನ್‌, ನಿಸರ್ಗ ಬಳಗದ ಅಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.