ADVERTISEMENT

ಖಡಕ್ ರೊಟ್ಟಿಯ ಬಿಳಿಜೋಳಕ್ಕೆ ಭಾರಿ ಡಿಮ್ಯಾಂಡ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 9:35 IST
Last Updated 6 ಏಪ್ರಿಲ್ 2011, 9:35 IST
ಖಡಕ್ ರೊಟ್ಟಿಯ ಬಿಳಿಜೋಳಕ್ಕೆ ಭಾರಿ ಡಿಮ್ಯಾಂಡ್
ಖಡಕ್ ರೊಟ್ಟಿಯ ಬಿಳಿಜೋಳಕ್ಕೆ ಭಾರಿ ಡಿಮ್ಯಾಂಡ್   

ಕೆರೂರ: ಇಲ್ಲಿನ ಸಂತೆಯಲ್ಲಿ ಆವಕ ಪ್ರಮಾಣ ತೀವ್ರವಾಗಿ ಕುಗ್ಗಿದ ಬಿಳಿ ಜೋಳ ಕ್ವಿಂಟಲ್‌ಗೆ ರೂ. 3800 ವರೆಗೆ ಬೆಲೆ ಏರಿಕೆ ಕಂಡು ದಾಖಲೆ ಸೃಷ್ಟಿಸಿದ್ದು, ಗಗನಕ್ಕೇರುತ್ತಿರುವ ಜೋಳದಿಂದ ಬಡ ಗ್ರಾಹಕರು ಬಿಸಿಲ ಬೇಗೆಯಿಂದ ತತ್ತರಿಸುವಂತಾಗಿದೆ.ಉತ್ತರ ಕರ್ನಾಟಕದ ಖ್ಯಾತಿಯ ಖಡಕ್ ರೊಟ್ಟಿಯ ಬಿಳಿಜೋಳ, ಫೆಬ್ರುವರಿಯಲ್ಲಿ ಕ್ವಿಂಟಲ್‌ಗೆ ಕೇವಲ ರೂ. 2000 ಇತ್ತು.

ಇಂದು ಏಕಾಏಕಿ ಗಗನಕ್ಕೇರುತ್ತಲೇ ಹೋಗುತ್ತಿದೆ. ಚಿನ್ನದಂತೆಯೇ ಜೋಳಕ್ಕೂ ಬೆಲೆ ತೇಜಿ ವಹಿವಾಟಿ ನಂತೆ ಏರಿಕೆ ಕಂಡು ಬರುತ್ತಿದ್ದು, ಬಡವರ ರೊಟ್ಟಿಗೆ ಇನ್ನೂ ಹೆಚ್ಚು ಬೆಲೆ ಬಿಸಿ ತಟ್ಟುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.

ತಗ್ಗಿದ ಇಳುವರಿ: ಅಕ್ಟೋಬರ್ ತಿಂಗಳ ನಂತರ ಚಳಿಯಲ್ಲಿ ಮಂಜು ಮುಸುಕಿದ್ದರಿಂದ ತೇವಾಂಶ ಹೆಚ್ಚಿದ್ದ ರಿಂದ ಜೋಳದ ಇಳುವರಿ ಈ ವರ್ಷ ತೀವ್ರವಾಗಿ ಕುಸಿದಿದೆ.
ಈಗ ಮಾರುಕಟ್ಟೆಗೆ ಅವಶ್ಯವಿದ್ದಷ್ಟು ಜೋಳ ಲಭ್ಯವಾಗುತ್ತಿಲ್ಲ ಎಂದು ರೈತ ಧುರೀಣ ಸುಭಾಸಗೌಡ ಪಾಟೀಲ ಬೆಲೆ ಏರಿಕೆಗೆ ಕಾರಣ ಮುಂದಿಡುತ್ತಾರೆ.ಮುಂಬರುವ ದಿನಗಳಲ್ಲಿ ಜೋಳದ ದರ ಇನ್ನೂ ಹೆಚ್ಚುವ ಸಂಭವವಿದ್ದು, (ಅಂದಾಜು 5000 ರೂಪಾಯಿಯವರೆಗೆ) ಏರಿ ದಾಖಲೆ ನಿರ್ಮಿಸಲಿದೆ.

ಮಾರ್ಕೆಟ್‌ನ ಇತರೆ ದಿನಿಸುಗಳಂತೆ ಜೋಳವೂ ಅತಿ ತುಟ್ಟಿಯಾಗಿ, ಊಟಕ್ಕೆ ಉಪ್ಪಿನ ಕಾಯಿಗಿಂತಲೂ ಪ್ರಮುಖ ಖಾದ್ಯವಾಗಿರುವ ಉತ್ತರ ಕನ್ನಡಿಗರ ಖಡಕ್ ರೊಟ್ಟಿಗೆ ಬೆಲೆಯ ಬಿಸಿ (ಬೇಸಿಗೆ)ಯಲ್ಲಿ ಜೇಬಿಗೆ ಕತ್ತರಿ ಹಾಕುವ ಜೊತೆಗೆ ಈ ಬಾರಿ ಬೆವರಿಳಿಸಲಿದೆ ಎಂಬುದು ಸಂತೆ ಮಾರ್ಕೆಟ್‌ನಲ್ಲಿ ಜೋಳ ಮಾರುವ ವರ್ತಕರ ಅಂಬೋಣ.

ದಾಖಲೆಯ ಧಾರಣೆ: ಈಗಿಂದಲೇ ಲೆಕ್ಕಾಚಾರ ನಡೆದಿದ್ದು, ಕೆಲವರು ಈಗಲೇ ಜೋಳ ಸಂಗ್ರಹಕ್ಕೆ ಮುಂದಾಗುತ್ತಿರುವದು ಕಂಡು ಬರುತ್ತಿದೆ. ಇದು ಇನ್ನಷ್ಟು ದರ ಹೆಚ್ಚಳಕ್ಕೆ ಕಾರಣವಾಗಲಿದೆ. ದೊಡ್ಡ ರೈತರು ಜೋಳ ಸಂಗ್ರಹದ ‘ಹಗೆ’ಗಳಲ್ಲಿ ನೂರಾರು ಚೀಲ ತುಂಬಿ, ಹೆಚ್ಚಿನ ಬೆಲೆ ಇದ್ದಾಗ ಜೇಬು ತುಂಬಿಕೊಳ್ಳಲಿದ್ದಾರೆ.

ಈ ಬಾರಿ ಹಿಂಗಾರು ಹಂಗಾಮು ಮಳೆಗಳು ಸಮರ್ಪಕವಾಗಿ ಬೀಳದೇ, ಬಿತ್ತನೆ ತಡವಾದ ಕಾರಣ ಬಿಳಿ ಜೋಳ ಇಳುವರಿ ಪ್ರಮಾಣ ತೀವ್ರ ತಗ್ಗಿದ್ದು, ಬೇಡಿಕೆಯಷ್ಟು ಪ್ರಮಾಣ ಜೋಳ ಸಿಗುತ್ತಿಲ್ಲ. ಇದೇ ರೀತಿ ಆದರೆ ಮೇ ವೇಳೆಗೆ ಜೋಳ ಸುಮಾರು 5000 ರೂಪಾಯಿಯವರೆಗೆ ಏರುವ ಸಾಧ್ಯತೆ ಇದೆ ಎಂದು ವ್ಯಾಪಾರಿ ಮುರುಗೇಶ ಭವಿಷ್ಯ ನುಡಿಯುತ್ತಾರೆ.

ಜಿಲ್ಲೆಯಲ್ಲಿ ಸಮೃದ್ಧ ಜೋಳ ಬೆಳೆಗೆ ಹೆಸರಾದ ಬೆನಕಟ್ಟಿ, ಕಾಡರಕೊಪ್ಪ ಹಾಗೂ ಕಗಲಗೊಂಬದ ಚೊಕ್ಕ ಬಿಳಿ ಜೋಳಕ್ಕಂತೂ ಪ್ರಸಕ್ತ ವರ್ಷ ಬಂಗಾರದ ಬೆಲೆ ಬರಲಿದೆ.
ಆದರೆ, ಎಕರೆಗೆ 6 ಕ್ವಿಂಟಲ್ ಇಳುವರಿ ನಿರೀಕ್ಷಿಸಿದ್ದ ಕೃಷಿಕರಿಗೆ ತಗ್ಗಿದ ಇಳುವರಿಯಿಂದ ಲಭಿಸಿದ್ದು ಈ ಬಾರಿ ಕೇವಲ 2ರಿಂದ 3 ಕ್ವಿಂಟಲ್ ಮಾತ್ರ. ಇದರಿಂದ ಬೆಳೆದರೂ ತಕ್ಕುದಾದಷ್ಟು ಲಾಭ ದೊರಕುವುದಿಲ್ಲ ಎಂದು ರೈತ ಭೀಮಪ್ಪ ಪ್ರಜಾವಾಣಿಯೊಂದಿಗೆ ಬೇಸರ ವ್ಯಕ್ತಪಡಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.