ADVERTISEMENT

ಗುಡುಗು- ಸಿಡಿಲು ಸಹಿತ ಮಳೆ; ತಂಪಾದ ಇಳೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 7:48 IST
Last Updated 26 ಏಪ್ರಿಲ್ 2013, 7:48 IST

ಬಾದಾಮಿ: ಬುಧವಾರ ರಾತ್ರಿ ಇಲ್ಲಿ, ಒಂದು ಗಂಟೆಕಾಲ ಭಾರಿ ಗಾಳಿಯೊಂದಿಗೆ ಗುಡುಗು ಸಿಡಿಲಿನ ಆರ್ಭಟದಿಂದ ಮಳೆ ಸುರಿಯಿತು. ಮಳೆಯ ಆರಂಭದಲ್ಲಿ ಚಿಕ್ಕ ಗಾತ್ರದ ಆಲಿಕಲ್ಲುಗಳು ನೆಲಕ್ಕೆ ಅಪ್ಪಳಿಸಿದವು.

ಬಾದಾಮಿ ತಾಲ್ಲೂಕಿನಲ್ಲಿ ಸುತ್ತ ಮುತ್ತ ವ್ಯಾಪಕವಾಗಿ ರಾತ್ರಿ ಹತ್ತೂವರೆಯಿಂದ ಹನ್ನೊಂದೂವರೆ ಗಂಟೆಯವರೆಗೆ ಮಳೆಯಾಗಿದೆ. ಬೇಸಿಗೆಯಲ್ಲಿ ಇದೇ ಮೊದಲ ಮಳೆಯಾಗಿದೆ. ಹೊಲಗಳಲ್ಲಿ ನೀರು ನಿಂತು ಭೂಮಿಯೆಲ್ಲ ತಂಪಾಗಿದೆ. ನಗರದ ರಸ್ತೆಯಲ್ಲಿ ನೀರು ತುಂಬಿ ಹರಿದು ರಸ್ತೆ ಮತ್ತು ಚರಂಡಿಯೆಲ್ಲ ಸ್ವಚ್ಛವಾದವು.

ಬೇಸಿಗೆಯ ಬಿಸಿಲಿನಿಂದ ತತ್ತರಿಸಿದ ಜನತೆಗೆ  ಸ್ವಲ್ಪ ತಂಪೆನಿಸಿತು.ರೈತರು ಹೊಲಕ್ಕೆ ರಂಟೆ ಹೊಡೆಯಲು ಕೃಷಿ ಚಟುವಟಿಕೆಗೆ ಅನುಕೂಲವಾಯಿತು.
ಆದರೆ ಕೆಲವು ರೈತರು ಮಳೆಗಾಲ ಆರಂಭದ `ಅಶ್ವಿನಿ ಮಳೆಯಾದರೆ ಶಿಶುವಿಗೆ ಹಾಲಿಲ್ಲ' ಎಂದು ರೈತರು ಮಾತನಾಡಿಕೊಂಡರು. ಅಶ್ವಿನಿ ಮಳೆಯಾದರೆ ಮುಂದಿನ ಮಳೆಗಳು ಸರಿಯಾಗಿ ಆಗುವುದಿಲ್ಲ. ಬೆಳೆಗಳು ಸರಿಯಾಗಿ ಬರುವುದಿಲ್ಲ ಎಂಬ ಗಾಢವಾದ ನಂಬಿಕೆ ರೈತಾಪಿ ವರ್ಗದಲ್ಲಿದೆ. ಭವಿಷ್ಯದಲ್ಲಿ ಮಳೆ ಏನಾಗುತ್ತೋ  ಗೊತ್ತಿಲ್ಲ. ಆದರೆ ಸದ್ಯ ಮಳೆಯಾಗಿ ರೈತರು ನಿಟ್ಟುಸಿರು ಬಿಡುವಂತಾಗಿದೆ.

ಧಾರಾಕಾರ ಮಳೆ
ಗುಳೇದಗುಡ್ಡ ವರದಿ:
ನಗರದಲ್ಲಿ ಬುಧವಾರ ರಾತ್ರಿ ಗುಡುಗು, ಸಿಡಿಲು. ಗಾಳಿಯಿಂದ ಕೂಡಿದ ಅಶ್ವಿನಿ ಮಳೆ  ಸುಮಾರು 1 ಗಂಟೆ ವರೆಗೆ ಧಾರಾಕಾರ ಮಳೆ ಸುರಿಯಿತು.

ಮಳೆ ಬಾರದೆ ಬಿಸಿಲಿನ ತಾಪಕ್ಕೆ ತತ್ತರಿಸಿದ ಜನ ಸುಮಾರು 1 ಗಂಟೆ ವರೆಗೆ ಧಾರಾಕಾರ ಸುರಿದ ಮಳೆಯಿಂದ ಸ್ವಲ್ಪ ತಂಪಾದ ವಾತಾವರಣದಿಂದ ರೈತರು ಸಂತಸ ಪಟ್ಟಿದ್ದಾರೆ. ಈ ಮಳೆಯಿಂದ ಮುಂಗಾರು ಬಿತ್ತನೆಗೆ ಭೂಮಿ ರಂಟೆ ಹೊಡೆಯಲು ಅನುಕೂಲವಾಗಿದೆ.

ಅಶ್ವಿನಿ ಮಳೆಯು ಕೆಲವಡಿ, ತಿಮ್ಮಸಾಗರ, ತೋಗುಣಸಿ, ಹಾನಾಪೂರ, ಮುರುಡಿ, ಕೋಟೆಕಲ್ಲ, ಹುಲ್ಲಿಕೇರಿ, ಪರ್ವತಿ, ಹಳದೂರ, ಲಾಯದಗುಂದಿ, ನಾಗರಾಳಗಳಲ್ಲಿ ಕಂಡುಬಂದಿದೆ. 

ನೆಲಕಚ್ಚಿದ ಮರಗಳು
ಅಮೀನಗಡ ವರದಿ:
ಬಿಸಿಲ ಧಗೆಯಿಂದ ಬಸವಳಿದಿದ್ದ ಅಮೀನಗಡ ಸೇರಿ ಹೋಬಳಿ ವ್ಯಾಪ್ತಿಯ ಅನೇಕ ಗ್ರಾಮಗಳ ಜನರಿಗೆ ಗುರುವಾರ ಮಧ್ಯಾಹ್ನ ಸುರಿದ ಗಾಳಿ ಸಹಿತ ಮಳೆ ತಂಪೆರೆಯಿತು.

ಮಧ್ಯಾಹ್ನ 3 ಗಂಟೆಗೆ ಭಾರಿ ಗಾಳಿ, ಗುಡುಗು- ಸಿಡಿಲುಗಳ ಅಬ್ಬರರೊಂದಿಗೆ ಆರಂಭವಾದ ಮಳೆಯು ಸುಮಾರು 1ಗಂಟೆಯವರೆಗೆ ಸುರಿದಿದೆ. ಈ ನಡುವೆ ಅಮೀನಗಡ ಸಮೀಪದ ಕಬ್ಬಿನಗಣಿ- ಹಿರೇಮಾರ್ಗದ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಬೀಸಿದ ಗಾಳಿಗೆ ಹತ್ತರಿಂದ ಹದಿನೈದು ಗಿಡಗಳು ನೆಲಕ್ಕುರುಳಿವೆ. ಇದರಿಂದ ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು.

ಅಮೀನಗಡ ಹೋಬಳಿ ವ್ಯಾಪ್ತಿಯ ಕಮತಗಿ, ರಾಮಥಾಳ, ಹೂವಿನಹಳ್ಳಿ, ಕಳ್ಳಿಗುಡ್ಡ, ಐಹೊಳೆ, ಹಿರೇಮಾಗಿ, ಬೇನಾಳ, ರಕ್ಕಸಗಿ ಸುತ್ತಮುತ್ತ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.