ADVERTISEMENT

ಜನರೊಂದಿಗೇ ಇರುತ್ತೇನೆ: ಕಾರಜೋಳ

​ಪ್ರಜಾವಾಣಿ ವಾರ್ತೆ
Published 7 ಮೇ 2018, 7:00 IST
Last Updated 7 ಮೇ 2018, 7:00 IST

ಮುಧೋಳ: ‘ನಾನು ಚುನಾವಣೆ ಬಂದಾಗ ಮಾತ್ರ ಪ್ರಚಾರ ಮಾಡಲು ಹೋಗುವುದಿಲ್ಲ. ವರ್ಷದ 365 ದಿನಗಳನ್ನು ನಾನು ಜನರೊಂದಿಗೆ ಕಳೆಯುತ್ತಿರುವುದರಿಂದ, ನನಗೆ ಚುನಾವಣೆಯಲ್ಲಿ ಜನರು ವ್ಯಾಪಕವಾಗಿ ಬೆಂಬಲಿಸಿ ಆಶೀರ್ವದಿಸುತ್ತಿದ್ದಾರೆ’ ಎಂದು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.

ನಗರದ ಕೆಎಚ್‌ಬಿ ಕಾಲೊನಿಯಲ್ಲಿ ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಾನು 25 ವರ್ಷದಿಂದ ನುಡಿದಂತೆ ನಡೆದಿದ್ದೇನೆ. ಏನು ಮಾಡಲು ಸಾಧ್ಯವೋ ಅದನ್ನು ಮಾತ್ರ ಹೇಳಿದ್ದೇನೆ. ಏನು ಹೇಳಿದ್ದೇನೋ ಅದನ್ನು ಮಾಡಿ ತೋರಿಸಿದ್ದೇನೆ. ಒಂದು ಸಲ ಗ್ರಾಮದ ಮುಖಂಡರು ಸಮಸ್ಯೆ, ಆಗಬೇಕಾದ ಅಭಿವೃದ್ಧಿ ಕಾರ್ಯ ಹೇಳಿದರೆ ಸಾಕು. ನಾನೇ ಅವರಿಗೆ ಮಂಜೂರಾತಿ ದೊರೆತ ಬಗ್ಗೆ ಹೇಳುತ್ತೇನೆ. ಎಲ್ಲ ಗ್ರಾಮಗಳೊಂದಿಗೆ ಒಡನಾಟ ಹೊಂದಿದ್ದೇನೆ’ ಎಂದರು.

ADVERTISEMENT

‘ಈ ಚುನಾವಣೆಯಲ್ಲಿ ಕ್ಷೇತ್ರದ ಗ್ರಾಮಗಳಿಗೆ ಒಂದು ಸಲ ಮಾತ್ರ ಹೋಗಿದ್ದೇನೆ. ಅಲ್ಲಿಯ ಪಕ್ಷದ ಮುಖಂಡರು ಕಾರ್ಯಕರ್ತರು ತಾವೇ ಚುನಾವಣೆಗೆ ನಿಂತಂತೆ ಕಾರ್ಯಮಾಡುತ್ತಿದ್ದಾರೆ. ಈ ಜನತೆಯ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ತಾಲ್ಲೂಕು ಅಧ್ಯಕ್ಷ ಕೆ.ಆರ್.ಮಾಚಪ್ಪನವರ, ನಗರ ಘಟಕದ ಅಧ್ಯಕ್ಷ ಗುರುರಾಜ ಕಟ್ಟಿ, ಸದಾಶಿವ ಇಟಕನ್ನವರ, ಕಲ್ಲಪ್ಪಣ್ಣ ಸಬರದ, ಉದಯ ಸಾರವಾಡ, ಸುರೇಶ ಉದಪುಡಿ, ಲೋಕೇಶಗೌಡ, ಡಾ.ಪುಷ್ಪಾವತಿ ಕಾರಜೋಳ, ಶ್ರೀದೇವಿ ರಜಪೂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.