ADVERTISEMENT

ಜಾತಿ ಹೆಸರಿನಲ್ಲಿ ರಾಜಕಾರಣ: ಟೀಕೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 6:21 IST
Last Updated 22 ನವೆಂಬರ್ 2017, 6:21 IST
ವೀಣಾ ಕಾಶಪ್ಪನವರ
ವೀಣಾ ಕಾಶಪ್ಪನವರ   

ಕೂಡಲಸಂಗಮ: ಹುಲ್ಲಳ್ಳಿ ಗ್ರಾಮದ ಸ್ಮಶಾನ ಭೂಮಿ ಅಭಿವೃದ್ದಿ ವಿಷಯದಲ್ಲಿ ಬಿಜೆಪಿ. ಪ್ರೇರಿತ ಕೆಲವು ವ್ಯಕ್ತಿಗಳು ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡುತ್ತಾ ಹುಲ್ಲಳ್ಳಿ ಗ್ರಾಮ ಮತ್ತು ತಾಲೂಕಿನಲ್ಲಿ ಕಲುಷಿತ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ನಾನು ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಹುಲ್ಲಳ್ಳಿ ಗ್ರಾಮಕ್ಕೆ ಮತಯಾಚನೆಗೆ ಹೋದಾಗ ಗ್ರಾಮ ಸ್ಥರೆಲ್ಲ ಸೇರಿ ಗ್ರಾಮದಲ್ಲಿ ಸ್ಮಶಾನಕ್ಕೆ ಭೂಮಿ ಕಾಯ್ದಿರಿಸಿದ್ದರೂ, ಅದನ್ನು ಅಭಿವೃದ್ಧಿಪಡಿಸದ ಕಾರಣ ಅಂತ್ಯ ಸಂಸ್ಕಾರಕ್ಕಾಗಿ ಪರದಾಡುವ ಸ್ಥಿತಿ ಇತ್ತು. ಸ್ಮಶಾನಕ್ಕಾಗಿ ಕಾಯ್ದಿಟ್ಟ ಜಾಗೆ ಅಭಿವೃದ್ದಿಪಡಿಸಿ ಅನುಕೂಲ ಮಾಡಿ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಅದರಂತೆ ಜಿಲ್ಲಾ ಪಂಚಾಯ್ತಿಯಿಂದ ₹ 4 ಲಕ್ಷ ಬಿಡುಗಡೆ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಅಭಿವೃದ್ಧಿ ಸಹಿಸದ ಬಿಜೆಪಿ ಪ್ರೇರಿತ ಕೆಲವು ವ್ಯಕ್ತಿಗಳು ಇದನ್ನು ವಿರೋಧಿಸಿ ಶಾಸಕರು ಕಾಮಗಾರಿ ಆರಂಭಕ್ಕೆ ಭೂಮಿ ಪೂಜೆ ನೇರವೇರಿಸಲು ಹೋದಾಗ ವಿಷ ಸೇವಿಸುವ ನಾಟಕವಾಡಿ ಶಾಸಕರಿಗೆ ಕೆಟ್ಟ ಹೆಸರು ತರುವ ಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ಘಟನೆಯ ನಂತರ ಹುಲ್ಲಳ್ಳಿ ಗ್ರಾಮದ ಎಲ್ಲ ಮುಖಂಡರೊಂ ದಿಗೆ ದೂರವಾಣಿ ಮೂಲಕ ಮಾತ ನಾಡಿ, ಎರಡು ದಿನದಲ್ಲಿ ಗ್ರಾಮ ದಲ್ಲಿ ಗ್ರಾಮಸಭೆ ನಡೆಸಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳೋಣ ಎಂದು ತಿಳಿಸಿದ್ದೆ. ಆದರೆ. ಇದನ್ನು ರಾಜ ಕೀಯಕ್ಕೆ ಬಳಸಿ ಕೊಂಡ ಬಿಜೆಪಿ. ಮುಖಂಡರು ಜಾತಿಯ ಹೆಸರಿನಲ್ಲಿ ಪಾದಯಾತ್ರೆ ಹಮ್ಮಿಕೊಂಡು ವಾತಾವರಣ ಕಲು ಷಿತಗೊಳಿಸಿದ್ದಾರೆ. ಈ ಪಾದಯಾತ್ರೆ ಸಂಪೂರ್ಣ ವಿಫಲವಾಗಿದೆ ಎಂದರು.

ADVERTISEMENT

ಗ್ರಾಮಕ್ಕೆ ಸ್ಮಶಾನ ಬೇಕೆ ಬೇಕು. ಅದನ್ನು ಎಲ್ಲಿ ನಿರ್ಮಿಸಬೇಕು ಎಂಬು ವುದನ್ನು ಸಂಭಂದಿಸಿದ ಅಧಿಕಾರಿಗಳು ನಿರ್ಧರಿಸಬೇಕು. ಅವರು ಅಂತಿಮ ತೀರ್ಮಾನ ಕೈಗೊಂಡ ನಂತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು, ಈಗಿದ್ದ ಸ್ಥಳದಲ್ಲಿ ಕಾಮಗಾರಿ ಕೈಗೊಳ್ಳ ದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದ ಸಂಗತಿ ನನ್ನ ಗಮನಕ್ಕೆ ಬಂದಿಲ್ಲ ಎಂದರು.

ಹುನಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡಮನಿ, ಇಳಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹ್ಮದಸಾಬ್‌ ಹಳ್ಳಿ, ಪುರಸಭೆ ಅಧ್ಯಕ್ಷೆ ಗಂಗಮ್ಮ ಎಮ್ಮಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಅರವಿಂದ ಈಟಿ, ಕಾಂಗ್ರೆಸ್ ಮುಖಂಡರಾದ ಶಿವಾನಂದ ಕಂಠಿ, ನೀಲಪ್ಪ ತಪೇಲಿ, ಮಹಾಂತೇಶ ಅವಾರಿ, ಸಂಜೀವ ಜೋಶಿ, ಮಹಾಲಿಂಗಯ್ಯ ಹಿರೇಮಠ, ಮುತ್ತಣ್ಣ ಕಲಗೋಡಿ, ವಸಂತ ದೇಶಪಾಂಡೆ, ಶ್ರೀಕಾಂತ ಹಿರೇಮಠ ಇದ್ದರು.

ಹೈಕೋರ್ಟ್ ತಡೆಯಾಜ್ಞೆ
ಎರಡು ಗುಂಪುಗಳ ಮಧ್ಯೆ ವಿವಾದಕ್ಕೆ ಕಾರಣವಾಗಿರುವ ತಾಲ್ಲೂಕಿನ ಹುಲ್ಲಳ್ಳಿ ಗ್ರಾಮದ ಸ್ಮಶಾನ ಭೂಮಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಈ ಸ್ಥಳದಲ್ಲಿ ಸ್ಮಶಾನ ನಿರ್ಮಿಸುವುದರಿಂದ ಕೆಲವು ಕುಟುಂಬಗಳಿಗೆ ತೊಂದರೆಯಾಗುತ್ತದೆ. ಕಾರಣ ಸ್ಮಶಾನ ಸ್ಥಳಾಂತರಿಸಬೇಕು ಎಂದು ಹುಲ್ಲಳ್ಳಿ ಗ್ರಾಮದ ಬಸಮ್ಮ ಮಲ್ಲಪ್ಪ ಕುಂಬಾರ ಹಾಗೂ ಮುತ್ತಣ್ಣ ಬಸಪ್ಪ ಕಟ್ಟೂರ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಪರಿಶೀಲನೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಮುದಗಲ್ಲ ಮುಂದಿನ ಆದೇಶವಾಗುವವರೆಗೂ ಈ ಸ್ಥಳದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬಾರದು ಎಂದು ನವೆಂಬರ್ 15 ರಂದು ಆದೇಶ ಮಾಡಿ ಎದುರುದಾರರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.