ADVERTISEMENT

ಜಿ.ಪಂ. ತಾ.ಪಂ. ಅಧ್ಯಕ್ಷರ ಬದಲಾವಣೆ?

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 8:25 IST
Last Updated 5 ಜನವರಿ 2012, 8:25 IST

ಬಾಗಲಕೋಟೆ: ಬಾಗಲಕೊಟೆ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರನ್ನು ಶೀಘ್ರ ಬದಲಾವಣೆ ಮಾಡುವ ಸಾಧ್ಯತೆ ಇರುವುದಾಗಿ ತಿಳಿದುಬಂದಿದೆ.

ಈ ಸಂಬಂಧ ಬಿಜೆಪಿ ಮುಖಂಡರು ಸಭೆ ನಡೆಸಿದ್ದು, ಪ್ರಸ್ತುತ ಅಧಿಕಾರ ದಲ್ಲಿ ಇರುವವರು ವಾರದೊಳಗೆ ತಮ್ಮ ಸ್ಥಾನವನ್ನು ತೆರವುಗೊಳಿಸಿ ಹೊಸಬರಿಗೆ ಅವಕಾಶ ಕಲ್ಪಿಸಿ ಕೊಡುವಂತೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ.

ಈ ಹಿಂದೆ ಆದ ಅಧಿಕಾರ ಹಂಚಿಕೆ ಸೂತ್ರದಂತೆ ಜಿ.ಪಂ. ಅಧ್ಯಕ್ಷೆ ಕವಿತಾ ದಡ್ಡೇನವರ ಮತ್ತು ಉಪಾಧ್ಯಕ್ಷ ಹೂವಪ್ಪ ರಾಠೋಡ ಹಾಗೂ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಶೀಲಾಬಾಯಿ ಲಮಾಣಿ, ಉಪಾ ಧ್ಯಕ್ಷ ರಾಜಶೇಖರ ಮುದೇನೂರ ಅವರ ಅಧಿಕಾರವಧಿ 2011 ಡಿಸೆಂಬರ್‌ಗೆ ಪೂರ್ಣಗೊಂಡಿದೆ. ಆದರೆ ಇಬ್ಬರೂ ತಮ್ಮ ಕುರ್ಚಿಗೆ ಅಂಟಿಕೊಂಡ ಕಾರಣ ಹೊಸಬರ ಆಯ್ಕೆ ಪ್ರಕ್ರಿಯೆ ವಿಳಂಬವಾಗಿದೆ.

ಈ ಸಂಬಂಧ ಈಗಾಗಲೇ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ಜೊತೆ ಪಕ್ಷದ ಮುಖಂಡರು ಮಾತುಕತೆ ನಡೆಸಿದ್ದು, ತಕ್ಷಣ ತಮ್ಮ ಸ್ಥಾನ ತೆರವು ಗೊಳಿಸುವಂತೆ ಮನವರಿಕೆ ಮಾಡಲಾಗಿದೆ.

ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತಾಡಿದ ಜಿ.ಪಂ.ಉಪಾಧ್ಯಕ್ಷ ಹೂವಪ್ಪ ರಾಠೋಡ, ಉಪಾಧ್ಯಕ್ಷ ಸ್ಥಾನ ತೆರವು ಸಂಬಂಧ ಇದುವರೆಗೆ ಯಾವೊಬ್ಬ ಮುಖಂಡರು ತಮ್ಮ ಬಳಿ ಮಾತುಕತೆ ನಡೆಸಿಲ್ಲ, ಪಕ್ಷದ ಹಿರಿಯರು ಹೇಳಿದರೆ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂದರು.

ಉಪಾಧ್ಯಕ್ಷನಾಗುವ ಸಂದರ್ಭ ದಲ್ಲಿ ನನಗೆ ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲದ ಕಾರಣ ಯಾರೊ ಬ್ಬರು ಮಾತುಕತೆ ನಡೆಸಿಲ್ಲ, ಆದರೆ ನನ್ನ ಭವಿಷ್ಯದ ರಾಜಕೀಯ ಉದ್ದೇಶದಿಂದ ಪಕ್ಷದ ಮುಖಂಡರು ಹೇಳಿದ ದಿನವೇ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದರು.

ಜಿ.ಪಂ. ಅಧ್ಯಕ್ಷೆ ಕವಿತಾ ದಡ್ಡೇನವರ ಅವರನ್ನು ಈ ಸಂಬಂಧ ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರನ್ನು ಮತ್ತು ಬಾಗಲಕೋಟೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ಅಧಿಕಾರವಧಿ ಪೂರ್ಣಗೊಂಡಿರುವುದರಿಂದ ಅವರ ರಾಜೀನಾಮೆ ಪಡೆದು ಹೊಸಬರನ್ನು ಅವರ ಸ್ಥಾನಕ್ಕೆ ನೇಮಿಸುವ ಪ್ರಕ್ರಿಯೆಗೆ ಶೀಘ್ರದಲ್ಲಿ ಚಾಲನೆ ನೀಡುವ ಸಂಭವ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.