ADVERTISEMENT

ಬಾದಾಮಿ: ಸಂಭ್ರಮದ ದಸರಾ ಮತ್ತು ಮೊಹರಂ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 5:12 IST
Last Updated 3 ಅಕ್ಟೋಬರ್ 2017, 5:12 IST

ಬಾದಾಮಿ: ಈ ಬಾರಿ ವಿಜಯದಶಮಿ ಮತ್ತು ಮೊಹರಂ ಆಚರಣೆಯಲ್ಲಿ ದೇವರಿಗೆ ಸಕ್ಕರೆ ಹಂಚುವುದು ಶನಿವಾರ ದಿನವೇ ಬಂದಿದ್ದರಿಂದ ಹಿಂದೂ–ಮುಸ್ಲಿಂ ಬಾಂಧವರು ಸಂಭ್ರಮದಿಂದ ದಸರಾ ಮತ್ತು ಮೊಹರಂ ಆಚರಿಸಿದರು.

ಅಕ್ಕಮಹಾದೇವಿ ಗುಡಿಯಲ್ಲಿ, ಕೋಣಮ್ಮ ದೇವಾಲಯದಲ್ಲಿ ಮತ್ತು ವೆಂಕಟೇಶ್ವರ ದೇವಾಲಯದಲ್ಲಿ ಬನ್ನಿಯನ್ನು ಮುಡಿಯಲಾಯಿತು.
ಮಹಿಳೆಯರು ಒಂಭತ್ತು ದಿನ ಬನ್ನಿ ಗಿಡಕ್ಕೆ ಪೂಜೆ ಮಾಡಿದ ನಂತರ ದಶಮಿಯ ದಿನ ಮನೆಯಲ್ಲಿ ಸಿಹಿ ಹೋಳಿಗೆ, ಕರಿಕಡಬು, ಗೋಧಿ ಹುಗ್ಗಿ, ಸಜ್ಜಕದ ಹೋಳಿಗೆ ಅಡಿಗೆ ಮಾಡಿ ಸವಿಯುವರು.

ದೇವಾಲಯಗಳಲ್ಲಿ ಬನ್ನಿ ಮುಡಿದ ನಂತರ ಕುಟಂಬ ಸಮೇತರಾಗಿ ಬನ್ನಿ ಬಂಗಾರವನ್ನು ಕೊಡಲು ತೆರಳಿದರು. ಹಬ್ಬದ ನಿಮಿತ್ತ ಹೊಸ ಬಟ್ಟೆಯನ್ನು ಧರಿಸಿಕೊಂಡು ತಮ್ಮ ಹಿರಿಯರಿಗೆ, ಸ್ನೇಹಿತರಿಗೆ ಮತ್ತು ಬಂಧು ಬಾಂಧವರ ಮನೆ ಮನೆಗೆ ತೆರಳಿ ‘ನಾವು ನೀವು ಬನ್ನಿ ಕೊಟ್ಟು ಬಂಗಾರದಂಗ ಇರೂಣು’ ಎಂದು ಆರಿಯ ಮತ್ತು ಬನ್ನಿಯ ಸೊಪ್ಪನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ADVERTISEMENT

ಹಿಂದೂ–ಮುಸ್ಲಿಂ ಮಹಿಳೆಯರು, ಮಕ್ಕಳು ಮತ್ತು ಪುರುಷರು ಮಸೀದೆಗೆ ತೆರಳಿ ದೇವರಿಗೆ ಸಕ್ಕರೆ, ಉದೂಬತ್ತಿ, ಲೋಬಾನ ಮತ್ತು ಮಕನಾ ಭಕ್ತಿ ಶ್ರದ್ಧೆಯಿಂದ ಅರ್ಪಿಸಿದರು. ಮಕ್ಕಳಾಗಲಿ ಎಂದು ದೇವರಿಗೆ ಬೇಡಿಕೊಂಡವರು ಹರಕೆಯನ್ನು ಪೂರೈಸಲು ಮಗುವಿನ ತೂಕದ ಸಕ್ಕರೆಯನ್ನು ವಿತರಿಸುವರು.

ಮೊಹರಂ ಅಂಗವಾಗಿ ಹಳೇ ಬಾದಾಮಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಯುವಕರು ಹಲಗೆ ಮತ್ತು ಶಹನಾಯಿ ವಾದ್ಯ ಮೇಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ಕುಣಿದು ಕುಪ್ಪಳಿಸಿದರು. ಬೇಡಿಕೊಂಡವರು ಫಕೀರರಾಗಿದ್ದರು ಕೆಲವರು ಹುಲಿ ವೇಷ ಮತ್ತು ಅಳ್ಳೊಳ್ಳಿ ಬಾವ ವೇಷವನ್ನು ಧರಿಸಿದ್ದರು.
ತಟಕೋಟೆ ಗ್ರಾಮದ ಯುವಕರು ಇಲ್ಲಿನ ಮಾರುತೇಶ್ವರ ದೇವಾಲಯದ ಆವರಣದಲ್ಲಿ ಹೆಜ್ಜೆ ಹಾಕುತ್ತ ತಳಮಸೀದೆ ಲಾಲಸಾಬ್‌ ದೇವರಿಗೆ ರಥವನ್ನು ನಿರ್ಮಿಸಿದರು. ನಂತರ ಪೂಜೆ ಮಾಡಿ ತೆಂಗಿನ ಕಾಯಿ ಅರ್ಪಿಸಿ ನೈವೇದ್ಯ ಮಾಡಿದರು. ರಥ ನಿರ್ಮಾಣ ಕಲೆಯು ಸೌಹಾರ್ದತೆಗೆ ಸಾಕ್ಷಿಯಾಗಿತ್ತು.

ಸಾವಿರಾರು ಮಂದಿ ರಥ ನಿರ್ಮಾಣದ ಹೆಜ್ಜೆಯ ಕುಣಿತ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.