ADVERTISEMENT

ಮಹಿಳೆ ಆತ್ಮಹತ್ಯೆ: ಜನರ ಆಕ್ರೋಶ

ವೈದ್ಯಾಧಿಕಾರಿಗಳಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 10:05 IST
Last Updated 10 ಜೂನ್ 2013, 10:05 IST

ಗುಳೇದಗುಡ್ಡ: ಇಲ್ಲಿನ ಮನ್ನಿಕಟ್ಟಿ ಓಣಿಯ ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.

ಯಮನವ್ವ ಮಹಾಂತೇಶ ಗೋಚಗಿ (25) ಎಂಬ ಮಹಿಳೆ ಶನಿವಾರ ಅಚನೂರ ಗ್ರಾಮದ ದೇವಸ್ಥಾನಕ್ಕೆ ಹೋಗಿದ್ದಳು. ಅಲ್ಲಿಯೇ ವಿಷ ಸೇವಿಸಿದ ನಂತರ ಗುಳೇದಗುಡ್ಡಕ್ಕೆ ಹಿಂತಿರುಗಿದ್ದಳು ಎಂದು ತಿಳಿದು ಬಂದಿದೆ.

ವಿಷಯ ತಿಳಿದ ನೆರೆ ಹೊರೆಯ ಜನರು ವಿಷ ಸೇವಿಸಿದ ಮಹಿಳೆಯನ್ನು ನಗರದಲ್ಲಿನ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಇಂಜೆಕ್ಷನ್ ನೀಡಿದ ಬಳಿಕ ಬಾಗಲಕೋಟೆಗೆ ಕರೆದುಕೊಂಡು ಹೋಗಲು ತಿಳಿಸಿದರು. ಇಲ್ಲಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಹಿಳೆ ಸಾವನ್ನಪ್ಪಿರುವುದು ತಿಳಿದು ಬಂದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಇರಲಿಲ್ಲ. ಅದಕ್ಕಾಗಿ ಆಕ್ರೋಶಗೊಂಡ ಸಾರ್ವಜನಿಕರು ವೈದ್ಯಾಧಿಕಾರಿಗಳಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರಲ್ಲದೇ ವೈದ್ಯಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

`ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ವಿಷ ಸೇವಿಸಿ ಬಂದ ಮಹಿಳಾ ರೋಗಿಯನ್ನು ಪರೀಕ್ಷಿಸಲು   ವೈದ್ಯಾಧಿಕಾರಿಗಳು ಬೇಗ ಬರಲಿಲ್ಲ' ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಟ್ರ್ಯಾಕ್ಟರ್ ಹಾಯ್ದು ಮಹಿಳೆ ಸಾವು
ಗುಳೇದಗುಡ್ಡ:
ಸಮೀಪದ ತೋಗುಣಸಿ ಗ್ರಾಮದ ರೇಣವ್ವ ಮಲ್ಲಯ್ಯ ಪಟ್ಟದಕಲ್ಲ (30) ಎಂಬ ಮಹಿಳೆಯು ಗ್ರಾಮದ ಕ್ರಾಸ್‌ನಲ್ಲಿ ಬಸ್ಸಿಗಾಗಿ ಕಾಯ್ದು ಕುಳಿತಾಗ ವೇಗವಾಗಿ ಬಂದ ಟ್ರ್ಯಾಕ್ಟರ್ ಮಹಿಳೆಯ ಮೇಲೆ ಹಾಯ್ದು ಸ್ಥಳದಲ್ಲಿಯೇ ಮಹಿಳೆ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

ಮೃತಪಟ್ಟಿರುವ ಮಹಿಳೆಯ ಮಗ ವೀರೇಶ ಮಲ್ಲಯ್ಯ ಪಟ್ಟದಕಲ್ಲ ಎಂಬ ಬಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು. ಈ ಬಾಲಕನನ್ನು ಗುಳೇದಗುಡ್ಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. 

ಟ್ರ್ಯಾಕ್ಟರ್ ಚಾಲಕ ಠಾಣೆಗೆ ಬಂದು ಹಾಜರಾಗಿದ್ದಾನೆ. ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪಿ.ಎಸ್‌ಐ. ರತನ್‌ಕುಮಾರ ಜೀರಗ್ಯಾಳ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.