ADVERTISEMENT

ಮಾನವೀಯತೆ ಮರೆತ ಮತಾಂಧರು: ವೀಣಾ ಬನ್ನಂಜೆ

ಕಠುವಾ ಅತ್ಯಾಚಾರ ಪ್ರಕರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ ಚಿಂತಕಿ ವೀಣಾ ಬನ್ನಂಜೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 5:31 IST
Last Updated 18 ಏಪ್ರಿಲ್ 2018, 5:31 IST
ಬಾಗಲಕೋಟೆಯ ವಿ.ಪ್ರ. ಮಂಡಳದ ಎಸ್.ಆರ್‌.ಎನ್‌ ಕಲಾ ಶಿರೂರ ವಾಣಿಜ್ಯ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ಚಿಂತಕಿ ವೀಣಾ ಬನ್ನಂಜೆ ಮಾತನಾಡಿದರು
ಬಾಗಲಕೋಟೆಯ ವಿ.ಪ್ರ. ಮಂಡಳದ ಎಸ್.ಆರ್‌.ಎನ್‌ ಕಲಾ ಶಿರೂರ ವಾಣಿಜ್ಯ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ಚಿಂತಕಿ ವೀಣಾ ಬನ್ನಂಜೆ ಮಾತನಾಡಿದರು   

ಬಾಗಲಕೋಟೆ: ‘ಜೀವ ಕಾರುಣ್ಯ, ಜೀವ ಪ್ರೇಮ ನಶಿಸಿ ಹೋಗಿರುವ ಈ ಜಗತ್ತಿನಲ್ಲಿ ಮಾನವೀಯತೆ ಅಳಿಸಿ ಹೋಗಿದೆ. ಮತ್ಸರ, ಕೇಡು, ಕುಯುಕ್ತಿಗಳೇ ಪ್ರಮುಖವಾಗಿವೆ’ ಎಂದು ಚಿಂತಕಿ ವೀಣಾ ಬನ್ನಂಜೆ ಕಳವಳ ವ್ಯಕ್ತಪಡಿಸಿದರು.

ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್ಆರ್‌ಎನ್‌ ಕಲಾ, ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ 34ನೇ ವಾರ್ಷಿಕೋತ್ಸವ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಮ್ಮುವಿನಲ್ಲಿನ ಪುಟ್ಟ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಹತ್ಯೆಗೈದ ಮತಾಂಧರು ಮಾನವೀಯತೆ ಮರೆತಿದ್ದಾರೆ’ ಎಂದು ವೇದಿಕೆಯಲ್ಲಿ ಕಣ್ಣೀರಿಟ್ಟರು.

ADVERTISEMENT

‘ಒಳಿತು ಎಂಬುದು ದೂರ ಇಲ್ಲ, ಅದು ನಮ್ಮೊಳಗಿದೆ, ಅದನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕಾಗಿರುವುದು ಇಂದಿನ ಅಗತ್ಯ. ನಾನು ಏನೂ ಅಲ್ಲ ಎಂಬ ಭಾವನೆ ಬರಬೇಕು, ಕಣ್ಮುಚ್ಚಿ ಪ್ರಾರ್ಥಿಸಿದಾಗ ಅಂತರಂಗದ ಅದ್ಭುತ ಗೊತ್ತಾಗುತ್ತದೆ’ ಎಂದರು.

‘ಅಂಕ ಆಧಾರಿತ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಹೊಸಕಿ ಹಾಕಿದೆ. ಪಾಲಕರ ಒತ್ತಾಯಕ್ಕಾಗಿ ಶಿಕ್ಷಣ ನಡೆದಿದೆ. ಮತ್ತೊಬ್ಬರನ್ನು ಹೋಲಿಕೆ ಮಾಡುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳುವುದಿಲ್ಲ. ಒಳಗಣ್ಣು ತೆರೆದು ನೋಡುವ ಶಿಕ್ಷಣದ ಅವಶ್ಯ ಇದೆ’ ಎಂದರು.

ವಿದ್ಯಾ ಪ್ರಸಾರಕ ಮಂಡಳದ ಉಪ ಕಾರ್ಯಾಧ್ಯಕ್ಷ ರಾಮ ಮನಗೂಳಿ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಂ.ಜಿ. ದೀಕ್ಷಿತ್ ಅವರು ಸೇವಾ ನಿವೃತ್ತಿ ಹೊಂದುತ್ತಿರುವ ನಿಮಿತ್ಯ ಸಂಸ್ಥೆಯ ಪರವಾಗಿ ಬೀಳ್ಕೊಡಲಾಯಿತು. ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಯ ಸಾಧಕರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ, ಗೌರವ ಕಾರ್ಯದರ್ಶಿ ಸಂದೀಪ ಕುಲಕರ್ಣಿ, ಎಸ್.ಬಿ. ಸತ್ಯನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.