ADVERTISEMENT

ಮಾಸಾಂತ್ಯದವರೆಗೆ ನೀರು ಹರಿಸಲು ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 8:16 IST
Last Updated 5 ಡಿಸೆಂಬರ್ 2012, 8:16 IST

ಬೀಳಗಿ: ಸದ್ಯದ ಮಾಸಾಂತ್ಯದವರೆಗೆ ಕಾಲುವೆಯಲ್ಲಿ ನೀರು ಹರಿಸುವುದಾಗಿ ಜಮಖಂಡಿ ವೃತ್ತ ಕಚೇರಿಯ ಅಧೀಕ್ಷಕ ಎಂಜಿನಿಯರ್, ಬೀಳಗಿ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಜಂಟಿಯಾಗಿ ಲಿಖಿತವಾಗಿ ಒಪ್ಪಿಗೆ ಪತ್ರ ಕೊಟ್ಟನಂತರ ಜಿ.ಎಲ್.ಬಿ.ಸಿ.ಆವರಣದಲ್ಲಿ ಧರಣಿ ಹೂಡಿದ್ದ ಟೇಲೆಂಡ್ ರೈತರು ಧರಣಿಯನ್ನು ನಿಲ್ಲಿಸಿದರು.

ಮಂಗಳವಾರ ಬೆಳಿಗ್ಗೆ ಬಸವೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ನೀರಾವರಿ ಇಲಾಖೆಯ ಅಧಿಕಾರಿಗಳು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ, ಟೈರ್‌ಗಳಿಗೆ ರಸ್ತೆಯುದ್ದಕ್ಕೂ ಬೆಂಕಿ ಹಚ್ಚುತ್ತ ಬಂದು ಜಿ.ಎಲ್.ಬಿ.ಸಿ. ಆವರಣದಲ್ಲಿ ಸಭೆ ನಡೆಸಿದರು. ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ತಹ ಶೀಲ್ದಾರರಿಗೆ ಮನವಿ ಸಲ್ಲಿಸಿದ ರೈತರು ಪುನ: ಕಚೇರಿ ಅವರಣಕ್ಕೆ ಬಂದು ಸಭೆ ಹಾಗೂ ಧರಣಿ ನಡೆಸಿದರು. ಅಲ್ಲಿಯೇ ಉಪ್ಪಿಟ್ಟು ತಯಾರಿಸಿ ಉಪಹಾರ ಸೇವಿಸಿದರು.

ನವೆಂಬರ್ ತಿಂಗಳಿನಿಂದ ಇದು ವರೆಗೂ ಟೇಲೆಂಡ್ ಜಮೀನುಗಳಿಗೆ  ನೀರು ಒಂದು ಹನಿಯೂ ತಲುಪಿಲ್ಲ. ಆನ್ ಅಂಡ್ ಆಫ್ ಸಿಸ್ಟಮ್ ಅನ್ನು ವದು ಟೇಲೆಂಡ್ ರೈತರಿಗೆ ಒಂದು ಉರುಳಾಗಿದೆ. ಇದನ್ನು ಮೊದಲು ರದ್ದುಪಡಿಸಬೇಕು. ಇದನ್ನು ಮೊದಲು ಕೈ ಬಿಟ್ಟು ನಿರಂತರ ನೀರು ಹರಿಸುವ ಕಾರ್ಯಕ್ಕಿಳಿಯಬೇಕೆಂದರು.

ಅಧಿಕಾರಿಗೆ ಏಟು: ಮಧ್ಯಾಹ್ನ ಆಗ ಮಿಸಿದ ಜಮಖಂಡಿ ವೃತ್ತ ಕಚೇರಿಯ ಅಧೀಕ್ಷಕ ಎಂಜಿನಿಯರ್ ಮುರಲೀಧರ ಅವರು ನೀರಿನ ಬಗ್ಗೆ ಸಮಜಾಯಿಷಿ ನೀಡಲು ಯತ್ನಿಸಿದರೂ ಒಪ್ಪದ ರೈತರು ಡಿಸೆಂಬರ್ ಅಂತ್ಯದವರೆಗೆ ನೀರು ಹರಿ ಸುವುದಾಗಿ ಲಿಖಿತ ಒಪ್ಪಿಗೆ ಪತ್ರ ನೀಡಿ ದಾಗ ಮಾತ್ರ ಧರಣಿ ಕೈ ಬಿಡುತ್ತೇವೆ. ಇಲ್ಲದಿದ್ದಲ್ಲಿ ಮರಕ್ಕೆ ಕಟ್ಟಿ ಹಾಕು ತ್ತೇವೆಂದು ಪಟ್ಟು ಹಿಡಿದರು. ಒಂದು ಹಂತದಲ್ಲಿ ನಡೆದ ನೂಕಾಟ, ತಳ್ಳಾಟ ದಲ್ಲಿ ಅಧಿಕಾರಿಗಳ ಅಂಗಿ ಹಿಡಿದು ಜಗ್ಗಾಡಿದ ರೈತರು ಒಬ್ಬಿಬ್ಬ ಅಧಿಕಾರಿ ಗಳಿಗೆ ಏಟು ಕೂಡಾ ಕೊಟ್ಟಿದ್ದು ಕಂಡು ಬಂತು.

ಲಿಖಿತ ಒಪ್ಪಿಗೆ ರೈತರ ಒತ್ತಡಕ್ಕೆ ಮಣಿದ ಅಧೀಕ್ಷಕ ಎಂಜಿನಿಯರ್ ಮುರಳೀಧರ ಅವರು, ಬೀಳಗಿ ವಿಭಾ ಗದ ಕಾರ್ಯ ನಿರ್ವಾಹಕ ಎಂಜಿನಿ ಯರ್ ಎಫ್.ಎಸ್. ಇನಾಮದಾರ ಅವರೊಡನೆ ಜಂಟಿಯಾಗಿ ಲಿಖಿತವಾಗಿ ಈ ಮಾಸಾಂತ್ಯದವರೆಗೆ ನೀರು ಹರಿ ಸುವುದಾಗಿ ಒಪ್ಪಿಗೆ ಪತ್ರ ಬರೆದು ಕೊಟ್ಟ ನಂತರ ಧರಣಿಯನ್ನು ಕೈ ಬಿಡಲಾಯಿತು.

ಬೀಳಗಿ ಸ್ತಬ್ಧ: ರೈತರ ಕರೆಗೆ ಸ್ಪಂದಿಸಿದ ಇಡೀ ಬೀಳಗಿ ಪಟ್ಟಣದಲ್ಲಿ ಅಂಗಡಿ ಬಂದ್ ಮಾಡಲಾಗಿತ್ತು. ಸಾಯಂಕಾಲದವರೆಗೂ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು.  ಖಾಸಗಿ ವಾಹನ ಮಾತ್ರ ಓಡಾಡು ತ್ತಿದ್ದವು. ಹುಚ್ಚಪ್ಪಯ್ಯನ ಮಠದ ಸಿದ್ಧಯ್ಯ ಸ್ವಾಮೀಜಿ, ಜೆಮ್ ಸಕ್ಕರೆ ಕಾರ್ಖಾನೆ  ನಿರ್ದೇಶಕ ಆರ್.ಎಚ್. ಜಕ್ಕನಗೌಡ್ರ, ಮಾಜಿ ಶಾಸಕ ಜೆ.ಟಿ. ಪಾಟೀಲ, ಬಸವ ಪ್ರಭು ಸರನಾಡ ಗೌಡ, ಸಿದ್ದಪ್ಪ ಬೆಣ್ಣಿರೊಟ್ಟಿ, ಮಲ್ಲಣ್ಣ ನಾಗನಗೌಡ್ರ, ನೂರಲಿ ತಹಶೀಲ್ದಾರ, ಸಿದ್ದಪ್ಪ ಮೇಟಿ, ಯಲ್ಲಪ್ಪ ಮೇಟಿ, ಎಸ್.ಎಂ.ಕಟಗೇರಿ, ವಿವೇಕಾನಂದ, ಎಂ. ಎನ್.ಪಾಟೀಲ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.