ADVERTISEMENT

ಮೈಸೂರಿನ ಅಲೆಮಾರಿ ಕಲಾವಿದರ ಬೀದಿ ಬದುಕು

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 5:30 IST
Last Updated 9 ಜುಲೈ 2012, 5:30 IST

ಬಾಗಲಕೋಟೆ: ಕಲಾವಿದರ ಕುಟುಂಬವೊಂದು ಹೊಟ್ಟೆ ಪಾಡಿಗಾಗಿ ಬಾಗಲಕೋಟೆ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಬೀದಿಯಲ್ಲಿ ನೃತ್ಯ ಮಾಡುತ್ತಾ, ಬಂದ ಆದಾಯದಲ್ಲಿ ಜೀವನ ಸಾಗಿಸುತ್ತಿರುವುದನ್ನು ನೋಡಿದರೆ ಎಂಹವರಿಗೂ ಅನುಕಂಪ ಮೂಡದಿರದು.

ಮೈಸೂರು ಜಿಲ್ಲೆಯ ಕೆ.ಆರ್.ನಗರದ ಸಾತಿಗ್ರಾಮದವರಾದ ಈ  ಕಲಾವಿದ ಕುಟುಂಬ, ಬಾಗಲಕೋಟೆ ನಗರದ ಹಳೆಯ ನಗರವನದ ಬಳಿ ಇರುವ ತಂಗುದಾಣದಲ್ಲಿ ಇದೀಗ ವಾಸ್ತವ್ಯ ಹೂಡಿದೆ.

ಪ್ರತಿನಿತ್ಯ ಸಂಜೆಯಾಗುತ್ತಿದ್ದಂತೆ ತಮ್ಮ ಸರಕು ಸರಂಜಾಮು ತೆಗೆದುಕೊಂಡು ವಿವಿಧ ಬಡಾವಣೆಗಳಲ್ಲಿ ಚಲನಚಿತ್ರದ ಹಾಡುಗಳು, ಚಿತ್ರದ ದೃಶ್ಯಗಳನ್ನು ಅಭಿನಯಿಸುವ ಮೂಲಕ ಜನರಿಗೆ ಮನರಂಜನೆ ನೀಡಿ, ಅವರು ಕೊಟ್ಟ ಹಣದಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

ಮಹಿಳೆಯರು, ಮಕ್ಕಳನ್ನು ಕಟ್ಟಿಕೊಂಡು ತಮ್ಮ ಕುಟುಂಬ ಸಮೇತ ಅಲೆಮಾರಿ ಜೀವನ ಸಾಗಿಸುತ್ತಾ ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿಸಂಚಾರ ಮಾಡಿ ತಮ್ಮ ಕಲೆಯನ್ನು ತೋರ್ಪಡಿಸುತ್ತಿದ್ದಾರೆ.

ಪ್ರತಿದಿನ ಸಂಜೆಯಾಗುತ್ತಿದ್ದಂತೆ ದೇವಾಲಯ, ಸಮುದಾಯ ಭವನ, ಪ್ರಮುಖ ವೃತ್ತಗಳು, ಗ್ರಾಮದ ಅಗಸಿ ಮುಂಭಾಗದಲ್ಲಿ  ಚಲನಚಿತ್ರ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ಸ್ಥಳೀಯರನ್ನು ಗಮನಸೆಳೆಯುತ್ತಿದ್ದಾರೆ.
`ನಮ್ಮ ನೃತ್ಯ ನೋಡಿದ ಜನತೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ಇದೇ ನಮ್ಮ ಉಪಜೀವನಕ್ಕೆ ದಾರಿಯಾಗುತ್ತದೆ~ ಎಂದು ಕಲಾವಿದೆ ನಿರ್ಮಲಾ `ಪ್ರಜಾವಾಣಿ~ಗೆ ತಿಳಿಸಿದರು.

`ಅಲೆಮಾರಿ ಕಲಾವಿದರಾಗಿರುವ ನಮಗೆ ಸಮುದಾಯ ಭವನ, ದೇವಾಲಯ ಸೇರಿದಂತೆ ಮತ್ತಿತರ ಕಡೆ ನಾವು ಆಶ್ರಯ ಪಡೆದುಕೊಳ್ಳುತ್ತೇವೆ~ ಎಂದರು.

`ಮೈಸೂರಿನ ವೆಂಕಟೇಶ ನಾಟಕ ಕಂಪೆನಿ ಮಂಜುನಾಥ ನಾಟಕ ಕಂಪೆನಿ ಸೇರಿದಂತೆ ವಿವಿಧ ಕಂಪೆನಿ ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದೇನೆ. `ಸತಿ ಸಾವಿತ್ರಿ~, `ಹೇಮರಡ್ಡಿ ಮಲ್ಲಮ್ಮ~, `ಹರಿಶ್ಚಂದ್ರ~ ಸೇರಿದಂತೆ ವಿವಿಧ ನಾಟಕಗಳಲ್ಲಿ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದೇನೆ~ ಎಂದು ನಿರ್ಮಾಲ ಹೇಳಿದರು.

`ವಂಶಪರಂಪರೆಯಾಗಿ ಕಲೆಯನ್ನು ಬೆಳೆಸಿಕೊಂಡು ಬಂದಿರುವ ನಮ್ಮ ಕುಟುಂಬದವರು ಅಲೆಮಾರಿಯಾಗಿ  ಕಲೆಯನ್ನು ತೋರ್ಪಡಿಸಿಕೊಂಡು ಉಪಜೀವನ ಸಾಗಿಸುತ್ತಿದ್ದರು. ತಾತನ ಕಾಲದಲ್ಲಿ ಸಾಮಾಜಿಕ, ಪೌರಾಣಿಕ ನಾಟಕಗಳನ್ನು ಪ್ರದರ್ಶನ ಮಾಡುವದರೊಂದಿಗೆ ಉಪಜೀವನ ಸಾಗಿಸುತ್ತಿದ್ದರು~ ಎಂದರು.

`ಇಂದಿನ ಆಧುನಿಕ ಯುಗದ ಭರಾಟೆಯಿಂದಾಗಿ ನಾಟಕ ಕಂಪೆನಿಗಳು ನಷ್ಟ ಹೊಂದಿ ತೊಂದರೆ ಪಡೆಯುವಂತಾಗಿದೆ. ಇದರಿಂದಾಗಿ  ಊರು ಊರು ಅಲೆಯುತ್ತಾ ನೆರಳು ಸಿಕ್ಕಲ್ಲಿ ಮನೆಯನ್ನಾಗಿ ಮಾಡಿಕೊಂಡು ಸಂಜೆ ನೃತ್ಯ ಮಾಡಿ ಬಂದ ಹಣದಲ್ಲೇ ಕುಟುಂಬದ ಎಲ್ಲ ಸದಸ್ಯರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ~ ಎಂದು ಕಲಾವಿದ ಮೋಹನ `ಪತ್ರಿಕೆ~ಗೆ ತಿಳಿಸಿದರು.

ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ದೊರೆತಿಲ್ಲ. ಕಲಾವಿದರಿಗೆ ದೊರಕುವ ಯಾವುದೇ ಮಾಸಾಶನವನ್ನು ಪಡೆದುಕೊಂಡಿಲ್ಲ ಎಂದು ತಿಳಿಸಿದರು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.