ADVERTISEMENT

ರಸ್ತೆಗೆ ಚರಂಡಿ ನೀರು: ರೋಗ ಹರಡುವ ಆತಂಕ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 9:48 IST
Last Updated 4 ಡಿಸೆಂಬರ್ 2012, 9:48 IST

ಅಮೀನಗಡ: ಸ್ಥಳೀಯ ಗ್ರಾಮ ಪಂಚಾಯಿತಿ ವಾರ್ಡ ನಂ. 9 ಮತ್ತು 10ರಲ್ಲಿನ ಕೊಳಚೆ ನೀರು ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ಹಳ್ಳದ ರೀತಿಯಲ್ಲಿ ಪ್ರತಿನಿತ್ಯ ಹರಿಯುತ್ತಿದೆ.

ಕಳೆದ ಎರಡ್ಮೂರು ತಿಂಗಳಿನಿಂದ ಇಲ್ಲಿ ನಿತ್ಯ ನಿರಂತರವಾಗಿ ಕೊಳಚೆ ನೀರು ಹರಿಯುತ್ತಿದೆ. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕಾದ ಸ್ಥಳೀಯ ಗ್ರಾಮ ಪಂಚಾಯಿತಿ ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಜಾರಿಕೊಳ್ಳುತ್ತಿದ್ದರೆ, ಇದರ ಜವಾಬ್ದಾರಿ ಇರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಗೊತ್ತಿದ್ದರೂ ಜಾಣ ಕುರುಡತನ ಪ್ರದರ್ಶನ ಮಾಡುತ್ತಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ.

ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯ ಎರಡು ಬದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಚರಂಡಿಯನ್ನು ನಿರ್ಮಾಣ ಮಾಡಲಾಗಿದೆ. ವಾರ್ಡ್ ನಂ.9 ಮತ್ತು 10ರಲ್ಲಿನ ಕೊಳಚೆ ನೀರು ರಸ್ತೆಯ ಬದಿಯ ಚರಂಡಿಗೆ ಸೇರಿಕೊಳ್ಳುತ್ತಿತ್ತು, ಈಚಿನ ದಿನಗಳಲ್ಲಿ ಚರಂಡಿಯಲ್ಲಿ ಹೂಳು ತುಂಬಿಕೊಂಡು ರಸ್ತೆಯ ಮೇಲೆಯೇ ಕೊಳಚೆ ನೀರು ಹರಿಯುತ್ತಿದೆ.

ಇದಲ್ಲದೇ ಒಂದೇ ಸ್ಥಳದಲ್ಲಿ ಕೊಳಚೆ ನೀರು ನಿಂತು ರೋಗಾಣುಗಳು ಉತ್ಪತ್ತಿಯಾಗಲು ದಾರಿಯಾಗುತ್ತಿದೆ ಎಂದು ಸುತ್ತಮುತ್ತಲಿನ ಜನರು ಆತಂಕ ವ್ಯಕ್ತಪಡಿಸ್ದ್ದಿದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದರ ಪಕ್ಕದಲ್ಲಿಯೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 2 ಮತ್ತು ಸರ್ಕಾರಿ ಉರ್ದು ಶಾಲೆ ಇದ್ದು, ಮಕ್ಕಳು ಕೊಳಚೆ ನೀರು ದಾಟಿಕೊಂಡು ಹೋಗಬೇಕಾಗಿದೆ. ಇದಲ್ಲದೇ ಉಭಯ ಶಾಲೆಗಳ ಮುಂದೆ ಸ್ವಚ್ಚತೆ ಕೊರತೆ ಎದ್ದು ಕಾಣುತ್ತಿದೆ.

ಗ್ರಾಪಂ ವ್ಯಾಪ್ತಿಗೆ ನೀಡಲು ಪತ್ರ: ಗ್ರಾಮದಲ್ಲಿ ಹಾದು ಹೋಗಿರುವ ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯ ಪಕ್ಕದ ಚರಂಡಿ ನಿರ್ವಹಣೆಯನ್ನು ಗ್ರಾಪಂ ವ್ಯಾಪ್ತಿಗೆ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ದೇಶಪಾಂಡೆ ತಿಳಿಸಿದ್ದಾರೆ.

ಗ್ರಾಮದ ಗಟಾರಗಳಿಗಿಂತ ಹೆದ್ದಾರಿಯ ಚರಂಡಿ ಕಾಮಗಾರಿ ಎತ್ತರವಾಗಿದ್ದು, ಮತ್ತು ಚರಂಡಿಯಲ್ಲಿ ಹೂಳು ತುಂಬಿದೆ ಇದರಿಂದ ನೀರು ಪಾಸಾಗಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಚರಂಡಿ ನಿರ್ವಹಣೆಯನ್ನು ಗ್ರಾಪಂ ವ್ಯಾಪ್ತಿ ನೀಡಬೇಕು ಎಂದು ಪತ್ರ ಬರೆದಿದ್ದು, ಒಪ್ಪಿಗೆ ಬಂದ ಕೂಡಲೇ ಹೂಳು ತೆಗದು, ಮೇಲ್ಛಾವಣೆಯನ್ನು ಹಾಕಲಾಗುವುದು ಎಂದು ಪ್ರಜಾವಾಣಿಗೆ ತಿಳಿಸಿದರು.
ಪ್ರಕಾಶ ಆರ್. ಗುಳೇದಗುಡ್ಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.