ADVERTISEMENT

ಶಾಲೆಗಳಲ್ಲಿ ಪೋಸ್ಟರ್ ತೆರವಿಗೆ ಸೂಚನೆ

ಬಾಗಲಕೋಟೆ: ಮತಗಟ್ಟೆ, ಚೆಕ್‌ಪೋಸ್ಟ್‌ಗಳಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 8:36 IST
Last Updated 11 ಏಪ್ರಿಲ್ 2018, 8:36 IST

ಬಾಗಲಕೋಟೆ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳ ಹಾಗೂ ಪಕ್ಷಗಳ ಪೋಸ್ಟರ್, ಬ್ಯಾನರ್ ಹಾಗೂ ಕ್ಯಾಲೆಂಡರ್‌ ಹಾಕಿದಲ್ಲಿ ಅವುಗಳನ್ನು ತೆರವುಗೊಳಿಸುವಂತೆ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.ಚುನಾವಣೆಗೆ ಸಂಬಂಧಿಸಿದಂತೆ ಯಾವುದಾದರೂ ಪಕ್ಷಗಳು ಹಾಗೂ ಅಭ್ಯರ್ಥಿಗಳ ಗುರುತು, ಚಿಹ್ನೆಗಳು, ಭಾವಚಿತ್ರ ಇದ್ದರೂ ತೆಗೆಯುವಂತೆ ಸೂಚಿಸಲಾಗಿದೆ.

ಆಯೋಗದ ನಿರ್ದೇಶನ ಪಾಲಿಸುವಂತೆ ಆಯಾ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಶಾಲೆಗಳ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದ್ದಾರೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಗೈರು ಆಗುವಂತಿಲ್ಲ: ಮತದಾರರ ಪಟ್ಟಿಗೆ ಹೆಸರು ಆಯೋಜಿಸಲು ಏಪ್ರಿಲ್‌ 14ರವರೆಗೆ ಚುನಾವಣಾ ಆಯೋಗ ಹಮ್ಮಿಕೊಂಡಿರುವ ಮಿಂಚಿನ ನೋಂದಣಿ ಕಾರ್ಯಕ್ರಮದಲ್ಲಿ ಮತಗಟ್ಟೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಲು ತಿಳಿಸಲಾಗಿದೆ.

ADVERTISEMENT

ಕೆಲವೆಡೆ ಮತಗಟ್ಟೆ ಅಧಿಕಾರಿಗಳ ಗೈರು ಹಾಜರಿಯಿಂದ ನೋಂದಣಿ ಕಾರ್ಯ ನಿಧಾನಗತಿಯಲ್ಲಿ ಸಾಗಲು ಕಾರಣವಾಗಿದೆ. ಇದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಮತಗಟ್ಟೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲು ಸೂಚಿಸಲಾಗಿದೆ.

ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ: ಮಿಂಚಿನ ನೋಂದಣಿಯ ಪ್ರಗತಿ ಹಾಗೂ ಮತದಾರರ ಗುರುತಿನ ಚೀಟಿ ಮನೆ–ಮನೆಗೆ ತಲುಪಿವೆಯೇ ಎಂಬು
ದನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಮ್ ಮಂಗಳವಾರ ಜಮಖಂಡಿ ಹಾಗೂ ತೇರದಾಳ ಕ್ಷೇತ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮತದಾರರಿಂದ ಮಾಹಿತಿ ಕೂಡ ಪಡೆದರು.

ಚೆಕ್‌ಪೋಸ್ಟ್‌ಗಳಿಗೆ ಭೇಟಿ: ಕೆಲವು ಕಡೆ ಚೆಕ್‌ಪೋಸ್ಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಇಲ್ಲಿನ ಗದ್ದನಕೇರಿ ಕ್ರಾಸ್, ಮುಧೋಳ ತಾಲ್ಲೂಕು ಲೋಕಾಪುರದ ಲಕ್ಷಾನಟ್ಟಿ ಸರ್ಕಲ್‌ ಬಳಿಯ ಚೆಕ್‌ಪೋಸ್ಟ್‌, ಪಿ.ಡಿ.ಬುದ್ನಿ, ರಬಕವಿ–ಬನಹಟ್ಟಿ ತಾಲ್ಲೂಕು ಚಿಮ್ಮಡ, ಹನಗಂಡಿ ಚೆಕ್‌ಪೋಸ್ಟ್‌ಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ದಾಖಲಾತಿ ಪರಿಶೀಲಿಸಿದರು.

ಧಾರ್ಮಿಕ ಸ್ಥಳಗಳಿಗೆ ವಿನಾಯ್ತಿ...

ಪೂಜಾ ಸ್ಥಳ, ಧಾರ್ಮಿಕ ಕೇಂದ್ರಗಳ ಮೇಲೆ ಹಾರಿಸಲಾದ ಧಾರ್ಮಿಕ ಧ್ವಜ ಹಾಗೂ ಚಿಹ್ನೆಗಳನ್ನು ತೆಗೆಯದಂತೆ ಚುನಾವಣಾ ಆಯೋಗ ಅಧಿಕಾರಿಗಳಿಗೆ ಸೂಚಿಸಿದೆ. ಆದರೆ ಪಕ್ಷದ ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಹಾರಿಸಿದ್ದರೆ ತೆಗೆಯಬಹುದಾಗಿದೆ. ಜೊತೆಗೆ ಅಕ್ರಮ ಬ್ಯಾನರ್, ಬಂಟಿಗ್ಸ್‌ ತೆರೆಯಲು ಸೂಚಿಸಲಾಗಿದೆ.

ವಿಮಾನ ನಿಲ್ದಾಣದಲ್ಲೂ ಪರೀಕ್ಷೆ ಕಡ್ಡಾಯ: ಪ್ರಯಾಣಿಕರು ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸುವಾಗ ಇಲ್ಲವೇ ಹೊರಗೆ ಬರುವಾಗ, ಹೆಲಿಕಾಪ್ಟರ್‌ನಲ್ಲಿ ಬಂದವರ ಬ್ಯಾಗ್‌ಗಳನ್ನು ಕಡ್ಡಾಯವಾಗಿ ತಪಾಸಣೆಗೊಳಪಡಿಸಲಾಗುತ್ತದೆ. ದಿನದ 24 ಗಂಟೆಯೂ ತಪಾಸಣೆ ವ್ಯವಸ್ಥೆ ಮಾಡಿ, ಅಲ್ಲಿ ಕಡ್ಡಾಯವಾಗಿ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸುವಂತೆ ಆಯಾ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಆಯೋಗ ತಿಳಿಸಿದೆ. ₹50 ಸಾವಿರಕ್ಕಿಂತ ಹೆಚ್ಚಿನ ಹಣ ಒಯ್ಯುವುದಾದರೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಇಲ್ಲವೇ ಪೂರ್ವಾನುಮತಿ ಪಡೆದಿರಬೇಕಿದೆ. ಚುನಾವಣೆ ಪ್ರಚಾರಕ್ಕೆ ವಿಮಾನ, ಹೆಲಿಕಾಪ್ಟರ್‌ಗಳಲ್ಲಿ ಬರುವ ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರಿಗೂ ಇದರಿಂದ ವಿನಾಯಿತಿ ನೀಡಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.