ADVERTISEMENT

ಶಿಕ್ಷಣ ಪ್ರಸಾರದಲ್ಲಿ ನಿರ್ಲಕ್ಷ್ಯ ಸಲ್ಲ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 8:40 IST
Last Updated 2 ಫೆಬ್ರುವರಿ 2011, 8:40 IST

ಹುನಗುಂದ: ಶಿಕ್ಷಣ ಪಡೆಯುವಲ್ಲಿ ಯಾವೊಬ್ಬ ಮಗವು ವಂಚಿತವಾಗಬಾರದು. ಮಕ್ಕಳು ಸರಿಯಾದ ದಾಖಲಾತಿ ಮತ್ತು ಹಾಜರಾತಿಯನ್ನು ಪಡೆಯುವಂತೆ ಕಾಳಜಿ ವಹಿಸಬೇಕು. ಅವರಲ್ಲಿ ಕಲಿಕೆಯೊಂದಿಗೆ ಸೃಜನಶೀಲತೆಯನ್ನು ರೂಢಿಸುವಲ್ಲಿ ಶಿಕ್ಷಕರು ಹಾಗೂ ಪಾಲಕರು ಶ್ರಮಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಸವರಾಜಯ್ಯ ಹೇಳಿದರು. ಅವರು ನಗರದ ಲಯನ್ಸ್ ಶಾಲೆಯ ವಾರ್ಷಿಕೋತ್ಸವ ನಿಮಿತ್ತ  ಈಚೆಗೆ ಆಯೋಜಿಸಲಾಗಿದ್ದ ವಿಜ್ಞಾನ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ನಿಜವಾದ ಆಸಕ್ತಿಯನ್ನು ಗಮನಿಸಿ ಬೋಧನೆ ಮಾಡಬೇಕು. ಅವರಲ್ಲಿನ ಪಠ್ಯೇತರ ಚಟುವಟಿಕೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು. ಅದರಂತೆ ಖಾಸಗಿ ಶಾಲೆಗಳು ಸರಕಾರದ ವಿವಿಧ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.

ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎ.ಆರ್. ನಿಂಬಲಗುಂದಿ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಬಿ.ವಿ.ಪಾಟೀಲ ವಾರ್ಷಿಕೋತ್ಸವನ್ನು ಉದ್ಘಾಟಿಸಿದರು. ಉಪಾಧ್ಯಕ್ಷ ಎಸ್.ಎನ್.ಪಾಟೀಲ, ಗೌರವ ಕಾರ್ಯದರ್ಶಿ ಶಿವಾನಂದ ಕಂಠಿ, ಕ್ಷೇತ್ರ ಸಮನ್ವಯಾಧಿಕಾರಿ ವಿಜಯಲಕ್ಷ್ಮಿ ಒಡೆಯರ ಹಾಗೂ ಆಡಳಿತ ಮಂಡಳಿ ಸದಸ್ಯ ಮಹಾಂತೇಶ ಅವಾರಿ, ಎಂ.ಎಸ್.ತೊಂಡಿಹಾಳ, ಎಸ್.ವಿ.ಪಾಟೀಲ, ನಾಗಪ್ಪ ಬೀಳಗಿ ಮತ್ತು ಮಲ್ಲು ಕುಂಟೋಜಿ ಉಪಸ್ಥಿತರಿದ್ದರು.

ಪ್ರತಿಭಾ ಪುರಸ್ಕಾರ: ಸಂಜೆ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಮಾತನಾಡಿದರು. ಇಳಕಲ್ಲ ನಗರಸಭೆ ಸದಸ್ಯ ದೇವಾನಂದ ಕಾಶಪ್ಪನವರ ಮತ್ತು ಗುತ್ತಿಗೆದಾರ ರಾಜು ಹಿರೇಮಠ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷ ಬಸಪ್ಪ ಆಲೂರ ಅವರನ್ನು ಸತ್ಕರಿಸಲಾಯಿತು. ನಿರ್ದೇಶಕ ಮಹಾಂತೇಶ ಅವಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಾಧ್ಯಾಪಕ ಎಸ್.ಸಿ. ಗುಡದಪ್ಪನವರ ಸ್ವಾಗತಿಸಿದರು. ಬಿ.ಜಿ. ಮೆಣಸಿನಕಾಯಿ ವಂದಿಸಿದರು. ಪಿ.ಜಿ. ಹಳಪೇಟಿ ನಿರೂಪಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.