ADVERTISEMENT

2215 ಮಕ್ಕಳಿಗೆ ಅಪೌಷ್ಟಿಕತೆ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 10:08 IST
Last Updated 13 ಡಿಸೆಂಬರ್ 2012, 10:08 IST

ಬಾಗಲಕೋಟೆ: ರಾಜ್ಯದಲ್ಲಿ ಎರಡು ವರ್ಷಗಳ ಹಿಂದೆ ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಅತಿಹೆಚ್ಚು ಮಕ್ಕಳನ್ನು (ಸುಮಾರು 4 ಸಾವಿರ )ಹೊಂದಿರುವ ಜಿಲ್ಲೆಗಳಲ್ಲಿ ಒಂದು ಎಂಬ ಕಾರಣಕ್ಕೆ ಸಾಕಷ್ಟು ಕಳವಳ ಮೂಡಿಸಿದ್ದ ಬಾಗಲಕೋಟೆ ಇದೀಗ ಸುಧಾರಣೆಯ ಹಾದಿಯಲ್ಲಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಡಿಸೆಂಬರ್ 3 ರಿಂದ 5ರ ವರೆಗೆ ಜಿಲ್ಲೆಯಲ್ಲಿರುವ ಆರು ವರ್ಷದೊಳಗಿನ 2,07,380 ಮಕ್ಕಳನ್ನು ವಿಶೇಷ ಆರೋಗ್ಯ ತಪಾಸಣೆಗೆ ಒಳಪಡಿಸಿದ್ದು, ಅದರಲ್ಲಿ 2215(ಶೇ.1) ಮಕ್ಕಳು ಮಾತ್ರ ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಕಳೆದ ವರ್ಷದ ಅಂಕಿ-ಸಂಖ್ಯೆಗೆ ಹೋಲಿಸಿದರೆ ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಅರ್ಧದಷ್ಟು ಮಕ್ಕಳು ಚೇತರಿಸಿಕೊಂಡಿದ್ದಾರೆ.

ಉಳಿದಂತೆ 65,719 ಮಕ್ಕಳು (ಶೇ.32) ಸಾಧಾರಣ ಅಪೌಷ್ಠಿಕತೆ ಸಮಸ್ಯೆ ಎದುರಿಸುತ್ತಿದ್ದಾರೆ. ತೀವ್ರವಾಗಿ ಬಳಲುತ್ತಿರುವ 210 ಮಕ್ಕಳಿಗೆ ತಜ್ಞರಿಂದ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಬಾಲ ಸಂಜೀವಿನ ಮತ್ತು ಎನ್‌ಆರ್‌ಸಿ ಯೋಜನೆಯಡಿ 66 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ 4870 ಗರ್ಭಿಣಿ ಮಹಿಳೆಯರ ತಪಾಸಣೆ ಮಾಡಲಾಗಿದ್ದು, ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದ 234 ಮಹಿಳೆಯರಿಗೆ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ, 4197 ಬಾಣಂತಿಯರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಅದರಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದ 114 ಬಾಣಂತಿಯರಿಗೂ ಅಗತ್ಯ ಚಿಕಿತ್ಸೆ ನೀಡಲಾಗಿದೆ.

ಈ ಕುರಿತು `ಪ್ರಜಾವಾಣಿ'ಯೊಂದಿಗೆ ಬುಧವಾರ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಸ್.ಎಚ್.ಪಾಟೀಲ, ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನುರಿತ ಮಕ್ಕಳ ತಜ್ಞರಿಂದ ತಪಾಸಣೆ ಮತ್ತು ಅಗತ್ಯ ಔಷಧೋಪಚಾರ ಮಾಡಿದ ಪರಿಣಾಮ ಅಪೌಷ್ಠಿಕತೆಯಿಂದ ಬಳಲುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂದರು.

ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಾರದಲ್ಲಿ ನಾಲ್ಕು ದಿನ ಹಾಲು ಮತ್ತು ಎರಡು ದಿನ ಮೊಟ್ಟೆಯನ್ನು (ಮೊಟ್ಟೆ ತಿನ್ನದ ಮಕ್ಕಳಿಗೆ 6 ದಿನ ಹಾಲು) ಕಡ್ಡಾಯವಾಗಿ ಕಳೆದ ಆಗಸ್ಟ್‌ನಿಂದ ನೀಡಲಾಗುತ್ತಿದೆ ಎಂದು ತಿಳಿಸಿದರು.
3ರಿಂದ 6 ವರ್ಷದೊಳಿನ ಅಪೌಷ್ಠಿಕ ಮಕ್ಕಳಿಗೆ ಪ್ರತಿದಿನ ಎರಡು ಬಾರಿ(ಬೆಳಿಗ್ಗೆ ಮತ್ತು ಮಧ್ಯಾಹ್ನ) ರೂ.9.20 ಮೊತ್ತದಲ್ಲಿ ಸೇಂಗಾ ಉಂಡಿ, ಪಾಯಸ, ಅನ್ನದ ಕಿಚಡಿಯನ್ನು ಹಾಗೂ ಗರ್ಭಿಣಿ ಮತ್ತು ಬಾಣಂತಿಯರಿಗೆ ರೂ.6 ಮೊತ್ತದಲ್ಲಿ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿರುವ 2116 ಅಂಗನವಾಡಿಯಲ್ಲಿ ಪ್ರತಿ ತಿಂಗಳು ತೂಕ ಮತ್ತು ಆರೋಗ್ಯ ತಪಾಸಣೆ ಮಾಡುವ ಮೂಲಕ ಅಪೌಷ್ಠಿಕ ಮಕ್ಕಳನ್ನು ಗುರುತಿಸಿ, ಆದ್ಯತೆ ಮೇರೆಗೆ ಪೌಷ್ಠಿಕಾಂಶ ನೀಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರು, ಎಎನ್‌ಎಂ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯದ ಬಗ್ಗೆ ನಿಷ್ಕಾಳಜಿ, ಚಿಕ್ಕ ವಯಸ್ಸಿನಲ್ಲೇ ಮದುವೆ, ಮಕ್ಕಳ ಜನನದ ನಡುವಿನ ಅಂತರ ಕಡಿಮೆ ಹಾಗೂ ರಕ್ತ ಸಂಬಂಧಿಗಳಲ್ಲೇ ಮದುವೆಯಾಗುವ ಪ್ರಕರಣ ಹೆಚ್ಚಿರುವುದರಿಂದ ಅಪೌಷ್ಠಿಕತೆ ಸಮಸ್ಯೆ ಜಿಲ್ಲೆಯಲ್ಲಿ ತೀವ್ರವಾಗಲು ಕಾರಣ ಎಂಬುದು ತಜ್ಞರು ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.