
ತೇರದಾಳ: ‘ಸವದಿ ನಗರ, ದೇವರಾಜ ನಗರಕ್ಕ ಬರೋದಿಲ್ರಿ ಅಕ್ಕಾ. ನೀವ್ ₹20 ಹೆಚ್ಚ ಕೊಟ್ರು ಬರೋದಿಲ್ರಿ...
ಇದು ತೇರದಾಳ ಬಸ್ ನಿಲ್ದಾಣದ ಬಳಿ ಆಟೊ ಚಾಲಕರು ಪ್ರಯಾಣಿಕರಿಗೆ ಹೇಳುವ ನಿತ್ಯದ ಮಾತಾಗಿದೆ.
ಕೆಲವು ವರ್ಷಗಳ ಹಿಂದೆ ಪಟ್ಟಣದಾದ್ಯಂತ 24/7 ನೀರು ಸರಬರಾಜು ಮಾಡಲು ಪೈಪ್ ಅಳವಡಿಸಲು ರಸ್ತೆ, ಚರಂಡಿ ಯಾವುದನ್ನೂ ಲೆಕ್ಕಿಸದೆ ಅಗೆದು ಹಾಕಲಾಯಿತು. ರಾಜ್ಯ ಮಟ್ಟದಲ್ಲಿ ಕಾಮಗಾರಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಟೆಂಡರ್ ಪಡೆದ ಕಂಪನಿ ಇಲ್ಲಿಂದ ಕಾಲ್ಕಿತ್ತಿತು.
ಅತ್ತ ನಿರಂತರ ನೀರೂ ಸಿಗದೆ ಉಚಿತವಾಗಿ ಗುಂಡಿಗಳ ಭಾಗ್ಯ ಪಡೆದ ಪಟ್ಟಣಿಗರು ಪ್ರತಿನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಇಲ್ಲಿನ ಗುಂಡಿಗಳಲ್ಲಿ ವಾಹನ ಸಂಚಾರ ಬಲುಕಷ್ಟ. ಅದರಲ್ಲೂ ತ್ರಿಚಕ್ರ ಹಾಗೂ ದ್ವಿಚಕ್ರ ವಾಹನ ಸವಾರಿಯಂತೂ ಹೇಳತೀರದಾಗಿದೆ. ಈ ಕಾರಣಕ್ಕಾಗಿ ಪಟ್ಟಣದ ಬಹುತೇಕ ಆಟೊ ಚಾಲಕರು ಅಲ್ಲಿಗೆ ಹೋಗಿ ಬರಲು ನಿರಾಕರಿಸುತ್ತಾರೆ.
ಒಂದು ಬಾರಿ ಅಲ್ಲಿಗೆ ಹೋಗಿ ಬಂದರೆ ತಮ್ಮ ಗಾಡಿ ಹಾಳಾಗುವುದಲ್ಲದೆ ಮೈಕೈ ನೋವು ಉಚಿತವಾಗಿ ಸಿಗುತ್ತದೆ ಎನ್ನುತ್ತಾರೆ ಆಟೊ ಚಾಲಕರಾದ ಅಬ್ದುಲ್ ಮಹಾಲಿಂಗಪೂರ ಹಾಗೂ ರಿಯಾಜ ಸಂಗತ್ರಾಸ.
ಪಟ್ಟಣದ ಉಳಿದ ವಾರ್ಡ್ ಸದಸ್ಯರು ತಮ್ಮ ಇಚ್ಛಾಶಕ್ತಿಯಿಂದ ಗುಂಡಿಗಳನ್ನು ಮುಚ್ಚಿಸಿದರು. ಆದರೆ ದೇವರಾಜ ನಗರ ವ್ಯಾಪ್ತಿಯ ಎಂಟು ವಾರ್ಡ್‌ಗಳಲ್ಲಿನ ಕೆಲವು ವಾರ್ಡ್‌ಗಳಲ್ಲಿ ಜನತೆ, ಪ್ರತಿನಿಧಿಗಳು ಗುಂಡಿ ಮುಚ್ಚುವ ಕೆಲಸ ಮಾಡಿದರೆ ಕೆಲವು ಕಡೆಯ ಸದಸ್ಯರು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ಅಧಿಕಾರಾವಧಿ ಮುಗಿಸಿ ತೆರಳಿದರು.
ಮೊದಲಿದ್ದ ಕಂಪನಿಗೇ 24/7 ನೀರು ಸರಬರಾಜು ಕಾಮಗಾರಿ ಟೆಂಡರ್ ಮತ್ತೆ ದೊರೆತಿದೆ. ಹೀಗಾಗಿ ಈ ಬಾರಿ ಅವರಿಂದ ಸಂಪೂರ್ಣ ಕೆಲಸ ಮಾಡಿಸಲಾಗುವುದುಎಫ್.ಬಿ.ಗಿಡ್ಡಿ, ಪುರಸಭೆ ಮುಖ್ಯಾಧಿಕಾರಿ
ಶಾಸಕರ ಅನುದಾನದಲ್ಲಿ ಕೆಲವು ರಸ್ತೆಗಳನ್ನು ಸುಧಾರಿಸಲಾಗಿದೆ. ಅದೇ ಅನುದಾನದಲ್ಲಿ ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಮುಂದಾಗಬೇಕಿತ್ತು ಎನ್ನುವ ವಾದ ಸಾರ್ವಜನಿಕರದ್ದು. ಅಲ್ಲಿನ ಗುಂಡಿಗಳಲ್ಲಿ ವಾಹನ ಬಿಡಿ, ಪಾದಚಾರಿಗಳು ಸಂಚರಿಸಲು ಕಷ್ಟಪಡುವ ಸ್ಥಿತಿ ಇದೆ.
‘ತೇರದಾಳಕ್ಕೆ ಬಸ್ ಮೂಲಕ ಬಂದಿದ್ದೆ. ನಮ್ಮ ಸಂಬಂಧಿಕರ ಮನೆ ಸವದಿ ನಗರದಲ್ಲಿರುವುದರಿಂದ ಆಟೊದಲ್ಲಿ ಹೋಗಲು ಬಯಸಿದರೆ, ಅವರು ಅಲ್ಲಿಗೆ ಬರುವುದಿಲ್ಲ ಎಂದು ಹೇಳಿದರು. ಮೊದಲ ಬಾರಿ ಇಲ್ಲಿಗೆ ಬಂದಿದ್ದ ನಾನು ಲಗೇಜ್ ಹೊತ್ತು ನಡೆದುಕೊಂಡು ಹೋಗಬೇಕಾಯಿತು. ರಸ್ತೆ ಸರಿಯಿದ್ದರೆ ಈ ತಾಪತ್ರಯ ಇರುತ್ತಿರಲಿಲ್ಲ’ ಎನ್ನುತ್ತಾರೆ ಚಿಕ್ಕೋಡಿಯಿಂದ ಬಂದಿದ್ದ ಪ್ರಯಾಣಿಕ ರಾಮದೇವ ನರಸಾಪೂರ.
ಹೀಗೆ ಪುರದ ಮಾನ ಗುಂಡಿಗಳಿಂದ ಹೊರಟಿದೆ ಎನ್ನುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.