ADVERTISEMENT

ಮಹಾಲಿಂಗಪುರ | 40 ದಿನ; ₹40 ಸಾವಿರ ಆದಾಯ: ಕೊತ್ತಂಬರಿ ಬೆಳೆದು ಲಾಭ ಕಂಡ ರೈತ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 5:53 IST
Last Updated 18 ಏಪ್ರಿಲ್ 2025, 5:53 IST
ಮಹಾಲಿಂಗಪುರ ಸಮೀಪದ ಢವಳೇಶ್ವರ ಗ್ರಾಮದಲ್ಲಿ ರೈತ ರವಿ ಬೀರನಗಡ್ಡಿ ಬೆಳೆದ ಕೊತ್ತಂಬರಿ ಸೊಪ್ಪು
ಮಹಾಲಿಂಗಪುರ ಸಮೀಪದ ಢವಳೇಶ್ವರ ಗ್ರಾಮದಲ್ಲಿ ರೈತ ರವಿ ಬೀರನಗಡ್ಡಿ ಬೆಳೆದ ಕೊತ್ತಂಬರಿ ಸೊಪ್ಪು   

ಮಹಾಲಿಂಗಪುರ: ಅಲ್ಪಾವಧಿಯ ಕೃಷಿಯಲ್ಲಿ ಲಾಭ ಬರುವುದಿಲ್ಲ ಎನ್ನುವವರ ಸಂಖ್ಯೆಯೇ ಹೆಚ್ಚು. ಆದರೆ, ಇಲ್ಲೊಬ್ಬ ಕೃಷಿಕ ಕೇವಲ 40 ದಿನದಲ್ಲಿ ಕೊತ್ತಂಬರಿ ಸೊಪ್ಪು ಬೆಳೆದು ₹40 ಸಾವಿರ ಗಳಿಸಿದ್ದಾರೆ.

ಸಮೀಪದ ಢವಳೇಶ್ವರ ಗ್ರಾಮದ ರೈತ ರವಿ ಬೀರನಗಡ್ಡಿ ಅವರಿಗೆ 12 ಎಕರೆ ಜಮೀನು ಇದ್ದು,  ಅದರಲ್ಲಿ 1 ಎಕರೆ 10 ಗುಂಟೆ ಜಮೀನಿನಲ್ಲಿ ಮಾತ್ರ ಕೊತ್ತಂಬರಿ ಬೀಜ ಬಿತ್ತಿದ್ದರು. ಕೆಜಿಗೆ ₹110 ದರದಲ್ಲಿ 80 ಕೆಜಿ  ಕೊತ್ತಂಬರಿ ಬೀಜ ಖರೀದಿಸಿದ್ದರು. ಒಮ್ಮೆ ರಸಗೊಬ್ಬರ ಹಾಕಿ ಎರಡು ಬಾರಿ ರಾಸಾಯನಿಕ ಸಿಂಪಡಿಸಿದ್ದರು. ನಾಲ್ಕು ಬಾರಿ ನೀರುಣಿಸಿ ಕಳೆ ತೆಗೆದಿದ್ದರು. ನೀರಿನ ವ್ಯವಸ್ಥೆಯೂ ಇರುವುದರಿಂದ ಉತ್ತಮ ಇಳುವರಿ ಬಂದಿದೆ.

ಕೊತ್ತಂಬರಿ ಸೊಪ್ಪು ನೋಡಿದ ವರ್ತಕರೊಬ್ಬರು ₹50 ಸಾವಿರಕ್ಕೆ  ಎಲ್ಲವನ್ನೂ ಗುತ್ತಿಗೆ ಪಡೆದಿದ್ದರು. ರವಿ ಅವರಿಗೆ ಕೂಲಿಯಾಳು, ಸಾಗಣೆ ಮತ್ತು ಮಾರುಕಟ್ಟೆ ವೆಚ್ಚ ಉಳಿದಿದೆ. 40 ದಿನಕ್ಕೆ ಕಟಾವಿಗೆ ಬಂದ ಈ ಬೆಳೆಗೆ ಅವರು ₹10 ಸಾವಿರ ವೆಚ್ಚ ಮಾಡಿದ್ದಾರೆ. ಖರ್ಚು ತೆಗೆದು ₹40 ಸಾವಿರ ಲಾಭ ಗಳಿಸಿಕೊಂಡಿದ್ದಾರೆ.

ADVERTISEMENT

ಗುತ್ತಿಗೆ ಪಡೆದ ವರ್ತಕ 1 ಟ್ರೇಗೆ 50 ರಂತೆ ಅಂದಾಜು 750 ಟ್ರೇಯಲ್ಲಿ ಒಂದು ಹಿಡಿ ಕೊತ್ತಂಬರಿ ಕಟ್ಟಿಕೊಂಡು ಹುಬ್ಬಳ್ಳಿ ಮಾರುಕಟ್ಟೆಗೆ ಕಳುಹಿಸಿದ್ದಾರೆ. ಮಾರುಕಟ್ಟೆ ದರದಂತೆ ಒಂದು ಹಿಡಿ ಕೊತ್ತಂಬರಿಗೆ ₹5 ರಂತೆ ಲೆಕ್ಕ ಹಾಕಿದರೆ ₹1.50 ಲಕ್ಷಕ್ಕೂ ಅಧಿಕ ಲಾಭ ವರ್ತಕನಿಗೆ ಆಗಿದೆ.

‘ಮೂರು ವರ್ಷ ಕಬ್ಬು ಬೆಳೆದ ನಂತರ ಅಲ್ಪಾವಧಿ ಬೆಳೆ ಬೆಳೆದು ಮತ್ತೆ ಕಬ್ಬು ನಾಟಿ ಮಾಡಿದರೆ ಕಬ್ಬಿನ ಇಳುವರಿ ಹೆಚ್ಚಾಗುತ್ತದೆ. ಈ ಕಾರಣದಿಂದ ಕೊತ್ತಂಬರಿ ಸೊಪ್ಪು ಬೆಳೆಯಲು ಉತ್ಸುಕನಾದೆ. ವ್ಯಾಪಾರಿ ರಮೇಶ ಕಡಕೋಳ ಅವರ ಮಾರ್ಗದರ್ಶನದಲ್ಲಿ ಕೊತ್ತಂಬರಿ ಬೆಳೆಯಲು ಮುಂದಾದೆ’ ಎನ್ನುತ್ತಾರೆ ರೈತ ರವಿ ಬೀರನಗಡ್ಡಿ.

ರೈತ ರವಿ ಬೀರನಗಡ್ಡಿ
ಢವಳೇಶ್ವರ ಗ್ರಾಮದಲ್ಲಿ ರೈತ ರವಿ ಬೀರನಗಡ್ಡಿ ಬೆಳೆದ ಕೊತ್ತಂಬರಿ ಸೊಪ್ಪು
1 ಎಕರೆ 10 ಗುಂಟೆ ಜಮೀನಿನಲ್ಲಿ ಬಿತ್ತನೆ 80 ಕೆಜಿ  ಕೊತ್ತಂಬರಿ ಬೀಜ ಖರೀದಿ ಉತ್ತಮ ಇಳುವರಿ ಪಡೆದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.